ಪೌಷ್ಠಿಕ ಆಹಾರಕ್ಕಾಗಿ ಬುಡಕಟ್ಟು ಜನರ ಸತ್ಯಾಗ್ರಹ

| Published : Jun 20 2024, 01:05 AM IST

ಪೌಷ್ಠಿಕ ಆಹಾರಕ್ಕಾಗಿ ಬುಡಕಟ್ಟು ಜನರ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪೌಷ್ಠಿಕ ಆಹಾರದ ಪೂರೈಕೆಯನ್ನು ನಿಲ್ಲಿಸಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಅರಣ್ಯಮೂಲ ಬುಡಕಟ್ಟು ಒಕ್ಕೂಟ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಸಾಗರ

ಬುಡಕಟ್ಟು ಜನರಿಗೆ ಪೌಷ್ಠಿಕ ಆಹಾರದ ಪೂರೈಕೆಯನ್ನು ನಿಲ್ಲಿಸಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಅರಣ್ಯಮೂಲ ಬುಡಕಟ್ಟು ಒಕ್ಕೂಟವು ಗುರುವಾರದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದೆ.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ರಾಜ್ಯದಲ್ಲಿ ೧೨ ಬುಡಕಟ್ಟು ಸಮುದಾಯಗಳು ಆರ್ಥಿಕವಾಗಿ ತೀರ ಹಿಂದೆ ಉಳಿದಿದ್ದು, ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ಈ ಕುಟುಂಬ ವಾಸ ಮಾಡುತ್ತಿದೆ. ಸರ್ಕಾರ ಪೌಷ್ಠಿಕ ಆಹಾರ ನೀಡುವ ಯೋಜನೆ ಜಾರಿಗೆ ತಂದಿದೆ. ಸಿದ್ದರಾಮಯ್ಯ ಸರ್ಕಾರ ಒಂದು ವರ್ಷ ಆಹಾರ ನೀಡುವ ಭರವಸೆ ನೀಡಿತ್ತು. ಈ ತನಕ ಟೆಂಡರ್ ಕರೆದು ಯೋಜನೆ ಜಾರಿಗೆ ತಂದಿಲ್ಲ. ತಕ್ಷಣ ಟೆಂಡರ್ ಕರೆದು ಪೌಷ್ಠಿಕ ಆಹಾರ ವಿತರಣೆ ಮಾಡಬೇಕು. ಆಹಾರವನ್ನು ಆಯಾ ಗ್ರಾಮದ ಅಂಗನವಾಡಿಗಳಲ್ಲಿಯೇ ನೀಡಬೇಕು ಎಂದು ಒತ್ತಾಯಿಸಿದರು.

ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು ಮಾತನಾಡಿ, ಬುಡಕಟ್ಟು ಸಮುದಾಯದವರಿಗೆ ೨೦೧೯-೨೦ರಿಂದ ರಾಜ್ಯ ಸರ್ಕಾರ ಆರು ತಿಂಗಳುಗಳ ಕಾಲ ಪೌಷ್ಠಿಕ ಆಹಾರ ನೀಡುವ ಯೋಜನೆ ಜಾರಿಗೆ ತಂದಿತು. ಈಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ವರ್ಷ ಪೌಷ್ಠಿಕ ಆಹಾರ ನೀಡುವ ಭರವಸೆ ನೀಡಿತ್ತು. ಆದರೆ ಆರು ತಿಂಗಳು ನೀಡುವ ಪೌಷ್ಠಿಕ ಆಹಾರವನ್ನು ಸಹ ಟೆಂಡರ್ ಕರೆಯಲಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ನಿಲ್ಲಿಸಿ ಬುಡಕಟ್ಟು ಜನರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿದೆ. ಈ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದ್ದಾಗ್ಯೂ ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಅನಿವಾರ್ಯ ವಾಗಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪೌಷ್ಠಿಕ ಅಹಾರ ಬಿಡುಗಡೆ ಮಾಡುವ ತನಕ ಪ್ರತಿಭಟನೆ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಮಹಿಳಾ ಮುಖಂಡರಾದ ಲಕ್ಷ್ಮಮ್ಮ ಹಿರೇಮನೆ ಮಾತನಾಡಿ, ಎಲ್ಲದ್ದಕ್ಕೂ ಹೋರಾಟ ಮಾಡಿ ಹಕ್ಕು ಪಡೆಯುವುದು ಅನಿವಾರ್ಯ ಎನ್ನುವ ಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ. ಪೌಷ್ಠಿಕ ಆಹಾರ ಪಡೆಯುವುದು ನಮ್ಮ ಹಕ್ಕು ಆಗಿದ್ದು, ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಾಗರತ್ನ, ರವಿ ಕುಗ್ವೆ, ಲತಾಶ್ರೀ, ಕಮಲ, ಶುಕ್ರ, ಸರಸ್ವತಿ, ಸಾವಿತ್ರಿ, ಕಮಲಾಕ್ಷಿ ಮುಪ್ಪಾನೆ, ಪಾರ್ವತಮ್ಮ, ಚಂದ್ರಶೇಖರ್, ವನಜಾಕ್ಷಿ ಇನ್ನಿತರರು ಹಾಜರಿದ್ದರು.

ಸ್ಥಳದಲ್ಲೆ ಅಡುಗೆ ತಯಾರಿ : ಬೇಡಿಕೆ ಈಡೇರಿಸುವ ತನಕ ಸತ್ಯಾಗ್ರಹ ಕೈಗೊಂಡಿರುವ ಒಕ್ಕೂಟದ ಸದಸ್ಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಒಲೆ ಹೂಡಿ ಅಡುಗೆ ಮಾಡಿ ಮಧ್ಯಾಹ್ಯದ ಊಟವನ್ನು ಮಾಡಿದ್ದು ವಿಶೇಷವಾಗಿತ್ತು. ಬೇಡಿಕೆ ಈಡೇರಿಸುವ ತನಕ ಅಹೋರಾತ್ರಿ ಇಲ್ಲಿಯೆ ಅಡುಗೆ ತಯಾರಿಸುವುದು, ಮಲಗುವುದು ಮಾಡುತ್ತೇವೆ ಎಂದು ತಿಳಿಸಿದರು.