ಬಿಲ್ ಪಾವತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

| Published : Dec 05 2024, 12:32 AM IST

ಸಾರಾಂಶ

ಕಳೆದ ಐದು ವರ್ಷಗಳ ಹಿಂದೆಯೇ ಮಾಡಿದ ಕಾಮಗಾರಿಯ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಕುಷ್ಟಗಿ ತಾಲೂಕಿನ ಗುತ್ತಿಗೆದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಳೆದ ಐದು ವರ್ಷಗಳ ಹಿಂದೆಯೇ ಮಾಡಿದ ಕಾಮಗಾರಿಯ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಕುಷ್ಟಗಿ ತಾಲೂಕಿನ ಗುತ್ತಿಗೆದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.

2019,20ನೇ ಸಾಲಿನಲ್ಲಿಯೇ ನಿರ್ಮಾಣ ಮಾಡಲಾಗಿರುವ ಚೆಕ್ ಡ್ಯಾಂಗಳ ಬಿಲ್‌ನ್ನು ಇದುವರೆಗೂ ಪಾವತಿ ಮಾಡಿಲ್ಲ. ಇದರಿಂದ ನಾವು ಸಾಲ ಮಾಡಿ, ಸಂಕಷ್ಟಕ್ಕೆ ಸಿಲುಕಿದ್ದೇವೆ. ಇಲ್ಲದ ಕಾರಣ ನೀಡಿ ಅಧಿಕಾರಿಗಳು ಬಿಲ್ ಪಾವತಿಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಇದರಿಂದ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಪಾವತಿ ಮಾಡಿ ಎಂದು ಆಗ್ರಹಿಸಿದರು.

ಚೆಕ್ ಡ್ಯಾಂ ನಿರ್ಮಾಣ ಮಾಡಿರುವ ನಾವು ಎಲ್ಲವನ್ನು ಸರಿಯಾಗಿಯೇ ಮಾಡಿದ್ದೇವೆ. ತನಿಖೆಯ ನೆಪವನ್ನು ಮುಂದೆ ಮಾಡಿ, ಬಿಲ್ ಪಾವತಿ ಮಾಡದೆ ಕಾಲದೂಡುತ್ತಾ ಬಂದಿರುವ ಅಧಿಕಾರಿಗಳು ಈಗ ನಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಆದರೆ, ಗುತ್ತಿಗೆ ನಿಯಮಾನುಸಾರ ಕೆಲಸ ಮಾಡಿದ್ದೇವೆ. ಮಾಡಿದ ಕೆಲಸವೂ ಇದೆ. ಇಷ್ಟಾದರೂ ಬಿಲ್ ಪಾವತಿ ಮಾಡದೆ ಇದ್ದರೇ ನಾವು ಎಲ್ಲಿಗೆ ಹೋಗಬೇಕು. ಹೀಗಾಗಿ ಈ ಬಾರಿ ಅನಿರ್ದಿಷ್ಟಾವಧಿ ಧರಣಿಯನ್ನು ಪ್ರಾರಂಭಿಸಿದ್ದು, ಬಿಲ್ ಪಾವತಿಯಾಗುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಪುಂಡಲೀಕಪ್ಪ ಜೂಲಕಟ್ಟಿ, ಹನುಮಂತ ಹಿರೇಮನಿ, ಶುಖಮುನಿ ದೋಟಿಹಾಳ, ಮಹಾಂತೇಶ, ಮಂಜುನಾಥ ಕುರಿ, ಅಜೀಜ ಮೊದಲಾದವರು ಇದ್ದರು.

ಟ್ರ್ಯಾಕ್ಟರಿ ಟ್ರ್ಯಾಲಿ, ಎತ್ತು ಕದ್ದವರ ಬಂಧನ:

ಕುಕನೂರು ತಾಲೂಕಿನ ವಿವಿಧೆಡೆ ಟ್ರ್ಯಾಕ್ಟರಿ ಟ್ರ್ಯಾಲಿ, ಎತ್ತುಗಳನ್ನು ಹಾಗೂ ಶ್ರೀಗಂಧದ ಮರಗಳನ್ನು ಕದ್ದೋಯ್ದಿದ್ದವರನ್ನು ಪತ್ತೆ ಮಾಡಿರುವ ಪೊಲೀಸರು, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಹಾಗೆಯೆ ಸುಮಾರು 13 ಲಕ್ಷಕ್ಕೂ ಅಧಿಕ ನಗದು ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ಕುಕನೂರು ಎಪಿಎಂಸಿ ಆವರಣದಲ್ಲಿದ್ದ ಟ್ರ್ಯಾಕ್ಟರಿ ಟ್ರ್ಯಾಲಿಯನ್ನು ಕದ್ದಿದ್ದ ಆಡೂರು ಗ್ರಾಮದ ಬಸವರಾಜ ಸುರೇಶನನ್ನು ಬಂಧಿಸಿ, ಟ್ರ್ಯಾಲಿಯನ್ನು ವಸೂಲಿ ಮಾಡಲಾಗಿದೆ.ಶಿರೂರು ಗ್ರಾಮದ ಬಳಿ ತೋಟದಲ್ಲಿನ 11 ಶ್ರೀಗಂಧ ಮರಗಳನ್ನು ಕಡಿದುಕೊಂಡು ಹೋಗಿದ್ದನ್ನು ಸಹ ಪತ್ತೆ ಮಾಡಲಾಗಿದ್ದು, ಆರೋಪಿಗಳಾದ ಲಕ್ಷ್ಮಣ ಹರಣಿಶಿಕಾರಿ ಹಾಗೂ ಕೆ.ಎಸ್. ರೂಪಾ ನಾಯಕನನ್ನು ಬಂಧಿಸಿ, ನಾಲ್ಕುವರೆ ಲಕ್ಷ ರುಪಾಯಿ ವಸೂಲಿ ಮಾಡಲಾಗಿದೆ.ಕೊನೆಸಾಗರ ಗ್ರಾಮದ ಬಳಿ ಹೊಲದಲ್ಲಿ ಕಟ್ಟಿದ್ದ ಎರಡು ಎತ್ತುಗಳನ್ನು ಕದ್ದಿದ್ದ ಕದೀಮರನ್ನು ಸಹ ಪತ್ತೆ ಮಾಡಿ, ಆರೋಪಿತರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ. ರಾಮ ಎಲ್ ಅರಸಿದ್ದಿ ತಿಳಿಸಿದ್ದಾರೆ.ಯಲಬುರ್ಗಾ ವೃತ್ತದ ಸಿಪಿಐ ಮೌನೇಶ ಮಾಲಿಪಾಟೀಲ್ ನೇತೃತ್ವದಲ್ಲಿ ನಮ್ಮ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಅವರಿಂದ ಬರೋಬ್ಬರಿ 13 ಲಕ್ಷ ರುಪಾಯಿಯ ವಸ್ತು ಮತ್ತು ನಗದು ವಶಪಡಿಸಿಕೊಂಡಿದ್ದಾರೆ ಎಂದರು.