ಸಾರಾಂಶ
ಮೀನುಗಾರರ ಬೃಹತ್ ಪ್ರತಿಭಟನಾ ಸಭೆಯಲ್ಲಿ ನಾಗೇಶ್ ಖಾರ್ವಿ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಕುಂದಾಪುರಬೆಳಕು ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ನ್ಯಾಯಾಲಯ ನಿಷೇಧಿಸಿ ಹತ್ತು ವರ್ಷ ಸಂದರೂ ಇಂದಿಗೂ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ. ಆದೇಶ ಅನುಷ್ಠಾನಗೊಳಿಸಬೇಕಾದ ಇಲಾಖೆ ಬೇರೆ ಬೇರೆ ಪ್ರಭಾವಗಳಿಂದಾಗಿ ಕೈಕಟ್ಟಿ ಕುಳಿತಿದೆ. ಇನ್ನು ಹತ್ತು ದಿನಗಳೊಳಗೆ ಅವೈಜ್ಞಾನಿಕ ಮೀನುಗಾರಿಕೆಗೆ ಕಡಿವಾಣ ಹಾಕದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಕೂರುತ್ತೇವೆ ಎಂದು ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟ ರಾಜ್ಯಾಧ್ಯಕ್ಷ ನಾಗೇಶ್ ಖಾರ್ವಿ ಎಚ್ಚರಿಕೆ ನೀಡಿದರು.ಅವೈಜ್ಞಾನಿಕ ಮೀನುಗಾರಿಕೆಯಾದ ಬೆಳಕು ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧದ ಅನುಷ್ಟಾನಕ್ಕಾಗಿ ಹಾಗೂ ಸೀಮೆ ಎಣ್ಣೆ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ತ್ರಾಸಿ ಅರಬ್ಬಿ ಸಮುದ್ರದ ತೀರದಲ್ಲಿ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಜರುಗಿದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಒಕ್ಕೂಟದ ಗೌರವ ಸಲಹೆಗಾರ, ಮೀನುಗಾರರ ಮುಖಂಡ ಮದನ್ ಕುಮಾರ್ ಉಪ್ಪುಂದ ಮಾತನಾಡಿ, ಕರಾವಳಿಯ ಮೂರು ಜಿಲ್ಲೆಗಳಲ್ಲಿ 19 ಮಂದಿ ಶಾಸಕರಿದ್ದಾರೆ. ಅದರಲ್ಲಿ ಕರಾವಳಿ ತೀರ ಪ್ರದೇಶದಲ್ಲಿ 11 ಮಂದಿ ಶಾಸಕರಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳಿಗೆ ದೊಡ್ಡ ದೊಡ್ಡ ಬೋಟು ಮಾಲೀಕರು ಕಣ್ಣಿಗೆ ಕಾಣುತ್ತಾರೆ ವಿನಃ ಬಡ ನಾಡದೋಣಿ ಮೀನುಗಾರು ಕಣ್ಣಿಗೆ ಕಾಣೋದಿಲ್ಲ ಎಂದು ಹೇಳಿದರು.ಮುಖಂಡರಾದ ನವೀನ್‌ಚಂದ್ರ ಉಪ್ಪುಂದ, ದ.ಕ. ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ವಸಂತ ಸುವರ್ಣ, ಉ.ಕ ನಾಡದೋಣಿ ಮೀನುಗಾರರ ಒಕ್ಕೂಟದ ಸೋಮನಾಥ ಮೊಗೇರ ಮಾತನಾಡಿದರು.ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಹೆದ್ದಾರಿಯಲ್ಲೇ ಮಲಗುವೆ: ಶಾಸಕ ಗಂಟಿಹೊಳೆಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, ಅನ್ಯಾಯದ ವಿರುದ್ಧ ಪ್ರತಿಭಟಿಸಲು ಯಾವ ಮುಲಾಜು ಮಾಡಬಾರದು. ಪ್ರತಿಭಟಿಸಿದರೆ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ನಮಗಾದ ಅನ್ಯಾಯವನ್ನು ಸರಿಪಡಿಕೊಳ್ಳಲು ಪ್ರತಿಭಟನೆಯಿಂದ ಮಾತ್ರ ಸಾಧ್ಯ. ಕೂಡಲೇ ಅವೈಜ್ಞಾನಿಕ ಮೀನುಗಾರಿಕೆ ನಿಲ್ಲಬೇಕು. ನ್ಯಾಯಾಲಯದ ಕಾನೂನು ಅನುಷ್ಠಾನಗೊಳ್ಳಬೇಕು. ಅತೀ ಹೆಚ್ಚು ನಾಡದೋಣಿ ಮೀನುಗಾರರು ನನ್ನ ಕ್ಷೇತ್ರದಲ್ಲಿ ಇರುವುದರಿಂದ ಅವರಿಗಾಗುತ್ತಿರುವ ಅನ್ಯಾಯ ನೋಡಿಕೊಂಡು ಸುಮ್ಮನೆ ಕೂರವವನು ನಾನಲ್ಲ. ಬೇಡಿಕೆ ಈಡೇರದಿದ್ದರೆ ಮೀನುಗಾರರೊಂದಿಗೆ ಹೆದ್ದಾರಿಯಲ್ಲೇ ಮಲಗಿ ಪ್ರತಿಭಟಿಸುವೆ ಎಂದರು.ನಿಮ್ಮೊಂದಿಗೆ ಸದಾ ನಿಲ್ಲುವೆ: ಕೆ. ಗೋಪಾಲ ಪೂಜಾರಿಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ತಮ್ಮ ಮನವಿಯನ್ನು ಸರ್ಕಾರದ ಮಟ್ಟಕ್ಕೆ ಮುಟ್ಟಿಸಿ ತಮ್ಮೆಲ್ಲರ ಬೇಡಿಕೆಯನ್ನು ಈಡೇರಿಸಲು ಒತ್ತಾಯ ಮಾಡುತ್ತೇನೆ. ನಾಡದೋಣಿ ಮೀನುಗಾರರಿಗೆ ಅನ್ಯಾಯ ಆಗದ ರೀತಿಯಲ್ಲಿ ನ್ಯಾಯಕ್ಕಾಗಿ ನಡೆಸುವ ಹೋರಾಟಕ್ಕೆ ನಾನು ಎಂದಿಗೂ ಕೈಜೋಡಿಸುವೆ ಎಂದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಪ್ರತಿಭಟನಾನಿರತ ಮೀನುಗಾರರು ಮನವಿ ಸಲ್ಲಿಸಿದರು.ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ಚಂದ್ರ, ಉಡುಪಿ ಮೀನುಗಾರಿಕಾ ಇಲಾಖೆಯ ಸಹ ನಿರ್ದೇಶಕ ವಿವೇಕ್, ದ.ಕ. ಉಡುಪಿ ಮೀನುಗಾರಿಕಾ ಇಲಾಖೆಯ ಸಹ ನಿರ್ದೇಶಕ ಸಿದ್ದಯ್ಯ, ಉಡುಪಿ ಮೀನುಗಾರಿಕಾ ಇಲಾಖೆಯ ಜಿಲ್ಲಾ ನಿರ್ದೇಶಕಿ ಅಂಜನಾದೇವಿ, ತಾಲೂಕು ಸಹಾಯಕ ನಿರ್ದೇಶಕಿ ಸುಮಲತಾ, ಉಡುಪಿ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಮೀನುಗಾರ ಮುಖಂಡರಾದ ಯಶವಂತ್‌ಖಾರ್ವಿ, ವೆಂಕಟರಮಣ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐಗಳಾದ ಸವಿತ್ರ ತೇಜ್, ಜಯರಾಮ್ ಗೌಡ, ಪಿಎಸ್‌ಐಗಳಾದ ಹರೀಶ್ ಆರ್. ನಾಯ್ಕ್, ತಿಮ್ಮೇಶ್ ಬಿ.ಎನ್., ನಂಜಾ ನಾಯ್ಕ್, ಬಸವರಾಜ್ ಕನಶೆಟ್ಟಿ, ವಿನಯ್ ಕೊರ್ಲಹಳ್ಳಿ, ಪ್ರಸಾದ್,ಬಂದೋಬಸ್ತ್ ವ್ಯವಸ್ಥೆ ಕಲ್ಲಿಸಿದರು.
------------------------ಶಕ್ತಿ ಪ್ರದರ್ಶನ, ಆಕ್ರೋಶದ ನಡುವೆಯೂ ಮಾನವೀಯತೆ!ಮೂರು ಜಿಲ್ಲೆಗಳ ನಾಡದೋಣಿಗಳು ಸಮುದ್ರಕ್ಕಿಳಿಯದೇ ಬಂದ್ ಆಚರಿಸಿತು. ಮಹಿಳಾ ಮೀನುಗಾರರು ಕೂಡ ಮಾರುಕಟ್ಟೆ ಬಂದ್ ನಡೆಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾಡದೋಣಿ ಮೀನುಗಾರರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬೈಂದೂರು, ಗಂಗೊಳ್ಳಿ ಭಾಗದ ನಾಡದೋಣಿ ಮೀನುಗಾರರು ತ್ರಾಸಿಯ ಕಡಲತೀರದಲ್ಲಿ ನಾಡದೋಣಿಗಳನ್ನು ಲಂಗರು ಹಾಕಿ ಶಕ್ತಿ ಪ್ರದರ್ಶಿಸಿದರು. ಸ್ಥಳದಲ್ಲಿ ಜಮಾಯಿಸಿದ ಸಹಸ್ರಾರು ಸಂಖ್ಯೆಯ ಮೀನುಗಾರರು ತ್ರಾಸಿ ಗ್ರಾ.ಪಂ ವ್ಯಾಪ್ತಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66 ರ ಎರಡೂ ಬದಿಯ ರಸ್ತೆಗಳನ್ನು ಬಂದ್ ಮಾಡಿ ರಸ್ತೆ ತಡೆ ನಡೆಸಿದರು.
ಸುಮಾರು ಹತ್ತು ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ತಬ್ಧವಾಯಿತು.ರಸ್ತೆ ತಡೆಯ ನಡುವೆಯೂ ತುರ್ತು ಚಿಕಿತ್ಸೆಗಾಗಿ ತೆರಳುತ್ತಿರುವ ಆಂಬುಲೆನ್ಸ್ ವಾಹನಕ್ಕೆ ದಾರಿ ಮಾಡಿ ಕೊಡುವ ಮೂಲಕ ಪ್ರತಿಭಟನಾನಿರತ ಮೀನುಗಾರರು ಮಾನವೀಯತೆ ಮೆರೆದರು. ಪೊಲೀಸರ ಮನವಿಯ ಬಳಿಕ ರಸ್ತೆ ತಡೆಯನ್ನು ಹಿಂಪಡೆಯಲಾಯಿತು.