ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಏಳನೇ ವೇತನ ಆಯೋಗದ ಅನುಸಾರ ಸಾವಿರಾರು ನಿವೃತ್ತ ನೌಕರರಿಗೆ ನಿವೃತ್ತಿ ಸೌಲಭ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ನಿವೃತ್ತ ನೌಕರರ ವೇದಿಕೆಯಿಂದ ಫೆ.೨೮ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ವೇದಿಕೆ ಸಂಸ್ಥಾಪಕ, ಜಿಲ್ಲಾ ಸಂಚಾಲಕ ಕೆಂಪೇಗೌಡ ತಿಳಿಸಿದರು.ನಗರದ ಮಹದೇಶ್ವರ ದೇವಸ್ಥಾನದ ಬಳಿ ಇರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ೨೦೨೨ ಜುಲೈ ೧ರಿಂದ ೨೦೨೪ರ ಜುಲೈ ೩೧ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಅನ್ಯಾಯವಾಗಿದೆ. ನಮಗೆ ನೀಡಿರುವ ವೇತನ ಭತ್ಯೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದನ್ನು ಸರಿ ಮಾಡಿ ೭ನೇ ವೇತನ ಆಯೋಗದಂತೆ ನಮಗೆ ಬರಬೇಕಿರುವ ಬಾಕಿ ನಿವೃತ್ತಿ ಭತ್ಯೆ ಭರಿಸುವಂತೆ ಒತ್ತಾಯಿಸಿ, ೨೮ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸಾವಿರಾರು ನಿವೃತ್ತ ನೌಕರರು ತಮ್ಮ ಕುಟುಂಬಗಳ ಸಮೇತವಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ತಿಳಿಸಿದರು.
ಸರ್ಕಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಮ್ಮ ನಿವೃತ್ತ ಬದುಕನ್ನು ಸುಖಮಯವಾಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೋರಾಟಕ್ಕೆ ಇಳಿದಿದ್ದೇವೆ. ನಮ್ಮ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರಾದ ಅಣ್ಣಾ ಹಜಾರೆ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ಎಸ್.ಆರ್. ಹಿರೇಮಠ್ ಸೇರಿ ಹಲವು ಮಠಗಳ ಸ್ವಾಮೀಜಿಗಳು ಸಾಥ್ ನೀಡಲಿದ್ದಾರೆ ಎಂದರು.೨೦೨೨ರಲ್ಲೇ ೭ನೇ ವೇತನ ಆಯೋಗ ಜಾರಿಯಾಗಿದೆ. ಆದರೆ, ಇದನ್ನು ೨೦೨೪ರ ಆಗಸ್ಟ್ ೧ಕ್ಕೆ ಅನ್ವಯ ಆಗುವಂತೆ ಸರ್ಕಾರ ಅನುಷ್ಠಾನ ಮಾಡಿದೆ. ಇದರಿಂದ ೨೫ ತಿಂಗಳ ಅವಧಿಯಲ್ಲಿ ನಮಗೆ ವೇತನದಲ್ಲೂ ಅನ್ಯಾಯ ಆಗಿದೆ. ಆದರೆ, ಎಲ್ಲ ಸರ್ಕಾರಿ ನೌಕರರಿಗೂ ೭ನೇ ವೇತನ ಆಯೋಗದ ಪರಿಷ್ಕರಣೆಯಂತೆ ೨೦೨೫ ಆಗಸ್ಟ್ ೧ ರಿಂದ ವೇತನ ಪರಿಷ್ಕರಣೆ ಮಾಡಿರುವ ನಿಟ್ಟಿನಲ್ಲಿ ನಮಗೆ ವೇತನ ಭತ್ಯೆಯಲ್ಲಿ ಆಯೋಗದ ಪರಿಷ್ಕರಣೆಯಂತೆ ನಿವೃತ್ತಿ ಭತ್ಯೆ ನೀಡಬೇಕು. ಆದರೆ, ನಮಗೆ ೬ನೇ ವೇತನ ಆಯೋಗದಂತೆ ನಿವೃತ್ತಿ ಭತ್ಯೆ ನೀಡಲಾಗಿದೆ. ಇದರಿಂದ ನಿವೃತ್ತ ನೌಕರರಿಗೆ ೬ ಲಕ್ಷದಿಂದ ೧೮ ಲಕ್ಷ ರು. ವರೆಗೆ ನಷ್ಟ ಉಂಟಾಗಿದೆ. ಈ ನಿಟ್ಟಿನಲ್ಲಿ ನಮಗೆ ಬರಬೇಕಿರುವ ಬಾಕಿ ನಿವೃತ್ತಿ ಭತ್ಯೆ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದು, ನಮ್ಮ ಮನವಿಗೆ ಸ್ಪಂದಿಸದ ಕಾರಣ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಕಾರ್ಯದರ್ಶಿ ಬಿ.ಎನ್. ಕಾಡಯ್ಯ, ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಪದಾಧಿಕಾರಿಗಳಾದ ಬೈರಾಪಟ್ಟಣ ಹರಿದಾಸ್, ಎನ್. ಮೋಹನ್, ಬಿ.ಡಿ. ಲಕ್ಷ್ಮಣ್ ಗೌಡ, ಕನಕಪ್ಪ, ಗುರುಶಾಂತಪ್ಪ, ಚಿಕ್ಕಕೆಂಪೇಗೌಡ, ಪ್ರಾಂಕಿ ಡಿಸೋಜಾ, ಎಂ.ಇ. ಬಸವರಾಜು, ಬಿ.ಎಸ್. ವಿಜಯ್ ಕುಮಾರ್, ಚಿಕ್ಕವೀರಯ್ಯ ಇದ್ದರು.