ಸಾರಾಂಶ
ಸಿದ್ದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಸೆ. ೨೬ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಎಲ್ಲ ಬೇಡಿಕೆಗಳು ಈಡೇರುವ ವರೆಗೆ ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್ ಹಾಗೂ ಲೇಖನಿ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು. ಬೇಡಿಕೆ ಈಡೇರಿಸಿ ಉತ್ತಮ ಮತ್ತು ಗುಣಮಟ್ಟದ ರೀತಿಯಲ್ಲಿ ಸರ್ಕಾರಿ ಮತ್ತು ಸಾರ್ವಜನಿಕ ಕೆಲಸ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ತಾಲೂಕು ಘಟಕದ ಮೂಲಕ ಸೋಮವಾರ ಮನವಿ ಸಲ್ಲಿಸಲಾಗಿದ್ದು, ೧೭ಕ್ಕೂ ಹೆಚ್ಚು ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಅಗತ್ಯವಾದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಇನ್ನಿತರ ಇಂಟರ್‌ನೆಟ್ ಸಾಧನಗಳಿಲ್ಲದೇ ಕಾರ್ಯನಿರ್ವಹಿಸಲು ಒತ್ತಡ ಹೇರುತ್ತಿದ್ದು, ಆಡಳಿತಾಧಿಕಾರಿಗಳಿಗೆ ಮಾನಸಿಕ ಮತ್ತು ಶಾರೀರಿಕ ಪರಿಣಾಮಗಳು ಆಗುತ್ತಿವೆ. ಉತ್ತಮ ಗುಣಮಟ್ಟದ ಕುರ್ಚಿ, ಟೇಬಲ್, ಅಲ್ಮೇರಾ, ಮೊಬೈಲ್, ಲ್ಯಾಪ್‌ಟಾಪ್, ಪ್ರಿಂಟರ್, ಸ್ಕ್ಯಾನರ್ ಒದಗಿಸಬೇಕು ಎಂದು ಕೋರಿದ್ದಾರೆ. ವಿಷಯ ನಿರ್ವಾಹಕರಾಗಿ ಕಾರ್ಯಮಾಡುತ್ತಿರುವರನ್ನು ಮೂಲ ಸ್ಥಾನಕ್ಕೆ ಬಿಡುಗಡೆಗೊಳಿಸುವುದು. ಪದೋನ್ನತಿ ವಂಚಿತರಾದವರಿಗೆ ಪದೋನ್ನತಿ ನೀಡುವುದು. ಅಂತರ್ ಜಿಲ್ಲಾ ಪತಿ-ಪತ್ನಿ ವರ್ಗಾವಣೆ ಆದೇಶ ನೀಡುವುದು, ಸರ್ಕಾರಿ ರಜಾದಿನಗಳಲ್ಲಿ ಮೆಮೋ ಹಾಕದಂತೆ ಮತ್ತು ಮೆಮೋ ಹಾಕುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ, ಗ್ರಾ.ಆ. ಅಧಿಕಾರಿಗಳ ಸೇವೆಯನ್ನು ರಾಜ್ಯಮಟ್ಟದ ಜ್ಯೇಷ್ಠತೆಯಾಗಿ ಪರಿಗಣಿಸುವುದು, ಮೊಬೈಲ್ ತಂತ್ರಾಂಶಗಳ ವಿಚಾರವಾಗಿ ಈ ವರೆಗೆ ಆಗಿರುವ ಅಮಾನತುಗಳನ್ನು ರದ್ದುಪಡಿಸಿ ಹಿಂಪಡೆಯುವುದು, ಪ್ರಯಾಣಭತ್ಯೆ ದರವನ್ನು ₹೩೦೦೦ಗಳಿಗೆ ಹೆಚ್ಚುವರಿ ಮಾಡುವ ಕುರಿತು ಹಾಗೂ ಇನ್ನುಳಿದ ಹಲವು ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಘಟಕದ ಅಧ್ಯಕ್ಷ ಕೃಷ್ಣ ಪಿ. ನಾಯ್ಕ, ಕಾರ್ಯದರ್ಶಿ ಸಂತೋಷ ಎನ್.ಆರ್. ಹಾಗೂ ಶೇಖರ ಕಾಲೇಕರ, ನಿವೇದಿತಾ ಡಿ.ಎಂ., ರಾಣಿ ಎಂ.ಎಚ್., ಪವಿತ್ರಾ ಮೇಲ್ಮಾಳಗಿ, ಸಿಂಧು ಬಿ.ಆರ್. ಕಾವ್ಯಾ ವಿ.ಆರ್., ಪ್ರೀತಿ ಎಸ್.ಟಿ., ಕೆ.ಪಿ. ವಿದ್ಯಾ ಗೌತಮ ಎ., ದಿವ್ಯಾ ಜೆ., ಜಯಲಕ್ಷ್ಮೀ ಎನ್., ಯೋಗೇಶ ಆರ್., ಮನೋಜ ನಾಯ್ಕ, ನೆಲ್ಸನ್ ಫರ್ನಾಂಡಿಸ್, ಪ್ರತಾಪಕುಮಾರ, ಸೂರ್ಯ ನಾಯ್ಕ, ಹರೀಶ ನಾಯ್ಕ, ಎಸ್.ಆರ್. ಗೌಡ, ಮಲ್ಲಿಕಾರ್ಜುನ, ಪುನೀತಕುಮಾರ, ಯೋಗೀಶ ಎಂ., ಪ್ರತಿಭಾ ಮರಾಠಿ ಮುಂತಾದವರು ಮನವಿ ಪತ್ರ ನೀಡಿದರು. ಶಿರಸ್ತೇದಾರ್ ಸಂಗೀತಾ ಭಟ್ ಮನವಿ ಸ್ವೀಕರಿಸಿದರು.