ಸಾರಾಂಶ
ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.31ರಿಂದ ಡಿ. 31ರಿಂದ ಅನಿರ್ದಿಷ್ಟ ಕಾಲ ಮುಷ್ಕರ ನಡೆಸಲು ಉದ್ಧೇಸಿಸಲಾಗಿದೆ.
ಹುಬ್ಬಳ್ಳಿ: ರಾಜ್ಯದ 4 ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸದೇ ಇದ್ದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಈ ಹಿಂದೆ ತೀರ್ಮಾನಿಸಿದಂತೆ ಡಿ. 31ರಿಂದ ಅನಿರ್ದಿಷ್ಟ ಕಾಲ ಮುಷ್ಕರ ನಡೆಸುವುದಾಗಿ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಂಟಿ ಕ್ರಿಯಾ ಸಮಿತಿ ವತಿಯಿಂದ ವಿಧಾನ ಮಂಡಲದ ಚಳಿಗಾಲ ಅಧಿವೇಶನದ ಮೊದಲ ದಿನವಾದ ಡಿ. 9ರಂದು ಬೆಳಗಾವಿ ಚಲೋ ನಡೆಸಿ ಮುಷ್ಕರ ನಡೆಸುವ ನೋಟಿಸ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಸರ್ಕಾರದ ಪರವಾಗಿ ನೋಟಿಸ್ ಸ್ವೀಕರಿಸಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಸಾರಿಗೆ ನೌಕರರ ಬೇಡಿಕೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ಪ್ರಯತ್ನಿಸುವ ಭರವಸೆ ನೀಡಿದ್ದರು.ಈ ಬಗ್ಗೆ ಸರ್ಕಾರ ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯ ಮನೋಭಾವ ಬಿಟ್ಟು ಕೂಡಲೇ ಜಂಟಿ ಕ್ರಿಯಾ ಸಮಿತಿ ಜತೆ ಚರ್ಚಿಸಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳಾದ ನೌಕರರ 38 ತಿಂಗಳ ವೇತನ ಹೆಚ್ಚಳ, ಜನವರಿ1, 2024 ರಿಂದ ಹೊಸ ವೇತನ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಸದನದಲ್ಲಿ ಸಾರಿಗೆ ಸಚಿವರ ಪರವಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್, ಶಾಸಕರ ಪ್ರಶ್ನೆಗೆ ಉತ್ತರಿಸಿ ಡಿ. 31ರೊಳಗಾಗಿ ಕಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಸಮಸ್ಯೆ ಬಗೆಹರಿಸುವ ವರೆಗೂ ನಮ್ಮ ಮುಷ್ಕರದ ತೀರ್ಮಾನ ಅಚಲವಾಗಿದೆ. ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಡಿ. 31ರಿಂದ ಬೆಳಗ್ಗೆ 6ರಿಂದ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ನೌಕರರ ಮೇಲೆ ಎಸ್ಮಾ ಜಾರಿ ಮಾಡಿ ಬೆದರಿಸುವ ಪ್ರಯತ್ನ ನಡೆಸುವರು. ಇದಕ್ಕೆಲ್ಲ ಹೆದರುವುದಿಲ್ಲ. ಬೇಡಿಕೆ ಈಡೇರಿದರೆ ಮಾತ್ರ ಮುಷ್ಕರ ಕೈಬಿಡಲಾಗುವುದು. ಇಲ್ಲದೇ ಇದ್ದರೆ 31ರಿಂದ ಯಾವುದೇ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಜಿ. ಪ್ರಕಾಶ, ಆರ್.ಎಫ್. ಕವಳಿಕಾಯಿ, ಗಂಗಾಧರ ಕಮಲದಿನ್ನಿ, ಪ್ರಕಾಶಮೂರ್ತಿ ಸೇರಿದಂತೆ ಹಲವರಿದ್ದರು.