ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

| Published : Feb 11 2025, 12:45 AM IST

ಸಾರಾಂಶ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಕೈಗೊಂಡ 1ನೇ ಹಂತದ ಮುಷ್ಕರದ ಯಾವುದೇ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವ ಕಾರಣ ಸೋಮವಾರದಿಂದ ಮತ್ತೆ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ/ಮಂಗಳೂರುಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಕೈಗೊಂಡ 1ನೇ ಹಂತದ ಮುಷ್ಕರದ ಯಾವುದೇ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವ ಕಾರಣ ಸೋಮವಾರದಿಂದ ಮತ್ತೆ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ ಆರಂಭವಾಗಿದೆ.ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ನಿರ್ಣಯದಂತೆ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಲಸದ ಸ್ಥಳದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಸೇವಾ ವಿಷಯಗಳ ಗೊಂದಲಗಳನ್ನು ಪರಿಹರಿಸುವಂತೆ ಸರ್ಕಾರವನ್ನು ಆಗ್ರಹಿಸಿ, ಕಳೆದ ವರ್ಷ ಸೆ 26 ರಿಂದ ಅ. 3 ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಿದ್ದರು. ಅ.3ರಂದು ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸಭೆ ಕರೆದು ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ್ದರು. ಅದರಂತೆ ಅದೇ ದಿನದಿಂದಲೇ ರಾಜ್ಯವ್ಯಾಪಿ ಮುಷ್ಕರ ಹಿಂಪಡೆಯಲಾಗಿತ್ತು.ಆದರೆ ಭರವಸೆ ನೀಡಿ 3 ತಿಂಗಳು ಕಳೆದರೂ ಇದುವರೆಗೆ ಸರ್ಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ, ಬದಲಾಗಿ ಮುಷ್ಕರದ ಮೊದಲಿಗಿಂತಲೂ ಈಗ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿ, ತಂತಮ್ಮ ತಾಲೂಕು ಕೇಂದ್ರಗಳಲ್ಲಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.ಉಡುಪಿ ತಾಲೂಕು ಕಚೇರಿಯ ಮಂದೆ ತಾಲೂಕು ಸಮಿತಿ ವತಿಯಿಂದ ನಡೆದ ಮುಷ್ಕರದಲ್ಲಿ ತಾಲೂಕು ಅಧ್ಯಕ್ಷ ಭರತ್ ಶೆಟ್ಟಿ, ಉಪಾಧ್ಯಕ್ಷ ಶಿವರಾಯ ಎಸ್., ಪ್ರ.ಕಾರ್ಯದರ್ಶಿ ಪ್ರಮೋದ್ ಎಸ್., ಖಜಾಂಚಿ ಲೋಕನಾತ್‌ ಲಮಾಣಿ ಮತ್ತು ಇತರ ಸದಸ್ಯರು ಭಾಗವಹಿಸಿದ್ದರು. ಮಂಗಳೂರು ವರದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ರಾಜ್ಯವ್ಯಾಪಿ ಮುಷ್ಕರ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಯ ತಾಲೂಕು ಕೇಂದ್ರಗಳ ಎದುರು ಪ್ರತಿಭಟನೆ ನಡೆಯಿತು.ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು, ಅಂತರ್‌ ಜಿಲ್ಲಾ ವರ್ಗಾವಣೆ, ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರೂಪಿಸುವುದು, ಸುಸಜ್ಜಿತ ಕಚೇರಿ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಜೀವಹಾನಿಯಾಗುವ ಗ್ರಾಮ ಆಡಳಿತ ಅಧಿಕಾರಿ ಕುಟುಂಬಕ್ಕೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.ಬಳಿಕ ಪ್ರತಿ ತಾಲೂಕು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕಳೆದ ವರ್ಷ ಸೆ.26ರಿಂದ ಅ.3ರವರೆಗೆ ಪ್ರಥಮ ಹಂತದ ಮುಷ್ಕರ ನಡೆದಿತ್ತು. ಆದರೆ ಬೇಡಿಕೆ ಈಡೇರದೆ ಇದ್ದುದರಿಂದ 2ನೇ ಹಂತದ ಮುಷ್ಕರ ಆರಂಭಿಸಿದ್ದಾರೆ.

------------------------ಮುಷ್ಕರ ನಿರತರ ಬೇಡಿಕೆಗಳು

* ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಇಲ್ಲ, ಪೀಠೋಪಕರಣ, ಮೊಬೈಲ್ ಇತ್ಯಾದಿಗಳಿಲ್ಲ, ಅವುಗಳನ್ನು ಒದಗಿಸಬೇಕು, ಅಂತರ್ಜಿಲ್ಲಾ ವರ್ಗಾವಣೆಯನ್ನು ರದ್ದು ಮಾಡಲಾಗಿದೆ, ಅದಕ್ಕೆ ಅವಕಾಶ ಕೊಡಬೇಕು, ನ್ಯಾಯಾಲಯದಲ್ಲಿರುವ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಿಂದ ಭಡ್ತಿಯನ್ನು ತಡೆಹಿಡಿಯಲಾಗಿದೆ, ಸರ್ಕಾರ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥ ಮಾಡಿ ಭಡ್ತಿಗೆ ಅವಕಾಶ ಮಾಡಿಕೊಡಬೇಕು, ಗ್ರಾ.ಆಯಅಧಿಕಾರಿಗಳಿಂದ ಎಲ್ಲಾ ತಾಂತ್ರಿಕ ಸೇವೆಗಳನ್ನು ಮಾಡಿಸಲಾಗುತ್ತಿದರಿಂದ, ಅವರದ್ದು ತಾಂತ್ರಿಕ ಹುದ್ದೆ ಎಂದು ಪರಿಗಣಿಸಬೇಕು.

* ಚಿಕ್ಕಮಗಳೂರಿನ ಜಿಲ್ಲಾಧಿಕಾರಿ 30 ಮಂದಿ ಗ್ರಾ.ಆ.ಅಧಿಕಾರಿಗಳ ಭಡ್ತಿಯನ್ನು ಏಕಾಏಕಿ ವಿಚಾರಣೆಯೂ ಇಲ್ಲದೇ ತಡೆ ಹಿಡಿದಿದ್ದಾರೆ, ಇದನ್ನು ಕೈಬಿಡಬೇಕು

* ಗದಗ್‌ ಜಿಲ್ಲೆಯಲ್ಲಿ ಪೌತಿ ಖಾತೆ ಅಭಿಯಾನವನ್ನು ಆರಂಭಿಸಲಾಗಿದೆ, ಇದು ಕಾನೂನಾತ್ಮಕವಾಗಿಲ್ಲದಿರುವುದರಿಂದ ಇದನ್ನು ಸ್ಥಗಿತಗೊಳಿಸಬೇಕು

* ಗ್ರಾಮ ಆಡಶಿತ ಅಧಿಕಾರಿಗಳನ್ನು ಬೇರೆಡೆಗೆ ನಿಯೋಜನೆ ರದ್ದು ಮಾಡಿ ಮೂಲ ಸ್ಥಾನದಲ್ಲಿಯೇ ಕೆಲಸ ಮಾಡಬೇಕು ಎಂಬ ಆದೇಶವಿದ್ದರೂ, ಉಡುಪಿ ಅದು ಜಾರಿಯಾಗಿಲ್ಲ, ತಕ್ಷಣ ಈ ಆದೇಶವನ್ನು ಜಾರಿಗೊಳಿಸಬೇಕು