ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರವು ಬೆಳ್ತಂಗಡಿ ಆಡಳಿತ ಸೌಧದ ಎದುರು ನಡೆಯುತ್ತಿದ್ದು, ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕ ಹರೀಶ್ ಪೂಂಜರಿಗೆ ಫೆ.14ರಂದು ಸಲ್ಲಿಸಿದರು.ಈ ಹಿಂದೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಮುಷ್ಕರವನ್ನು ಹಿಂಪಡೆಯಲಾಗಿತ್ತು. ನಂತರ ಸರಕಾರ ನೌಕರರ ಬೇಡಿಕೆಗಳ ಬಗ್ಗೆ ಯಾವುದೇ ತೃಪ್ತಿದಾಯಕ ಕ್ರಮಗಳನ್ನು ಕೈಗೊಂಡಿಲ್ಲ, ಬೇಡಿಕೆಗಳನ್ನು ಈಡೇರಿಸಿಲ್ಲ, ಬದಲಾಗಿ ಮುಷ್ಕರ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ನೀಡಿದೆ. ಇದರಿಂದಾಗಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೀಡಿದ ಕರೆಯಂತೆ ಸರಕಾರದ ಮುಂದೆ 23 ಬೇಡಿಕೆಗಳನ್ನು ಮುಂದುವರಿಸಿ, ರಾಜ್ಯವ್ಯಾಪಿ ಗ್ರಾಮ ಆಡಳಿತ ಅಧಿಕಾರಿಗಳು ಧರಣಿ ನಡೆಸುತ್ತಿದ್ದಾರೆ. ಬುಧವಾರ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಮುಷ್ಕರ ನಿರತರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಆಲಿಸಿದರಲ್ಲಿ ಬೇಡಿಕೆಗಳ ಈಡೇರಿಕೆಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಧರಣಿ ನಾಳೆಗೆ ಐದನೇ ದಿನಕ್ಕೆ ಮುಂದುವರಿಯಲಿದೆ.