ವಿಎಒಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

| Published : Sep 28 2024, 01:18 AM IST

ಸಾರಾಂಶ

ರಾಜ್ಯದಲ್ಲಿ ವಿಎಒಗಳು ಸರ್ಕಾರ ಅಭಿವೃದ್ಧಿಪಡಿಸಿರುವ 21ಕ್ಕೂ ಅಧಿಕ ವೆಬ್, ಮೊಬೈಲ್ ತಂತ್ರಾಂಶಗಳನ್ನು ಬಳಸಿ ಕಾರ್ಯ ನಿರ್ವಹಿಸುತ್ತಿದ್ದರೂ ನಮ್ಮ ಹುದ್ದೆಯನ್ನು ತಾಂತ್ರಿಕ ಹುದ್ದೆಗಳೆಂದು ಪರಿಗಣಿಸಿರುವುದಿಲ್ಲ.

ಕನ್ನಡಪ್ರಭ ವಾರ್ತೆ ಹುಣಸೂರು

ಗ್ರಾಮ ಆಡಳಿತ ಅಧಿಕಾರಿ (ವಿಎಒ) ಗಳಿಗೆ ಸುಸಜ್ಜಿತ ಕಚೇರಿ ಒದಗಿಸುವುದು, ಪ್ರೋಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅದಿಕಾರಿಗಳ ಕೇಂದ್ರ ಸಂಘ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರಕಿತು.

ತಾಲೂಕಿನಾದ್ಯಂತ ವಿವಿಧ ಹೋಬಳಿಗಳ ವ್ಯಾಪ್ತಿಯಲ್ಲಿರುವ 50 ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಕಪ್ಪುಪಟ್ಟಿ ಧರಿಸಿ ಶಾಂತಿಯುತ ಮುಷ್ಕರ ನಡೆಸಿದರು.

ತಾಲೂಕು ಘಟಕದ ಅಧ್ಯಕ್ಷ ನಾಗೇಶ್ ಮಾತನಾಡಿ, ರಾಜ್ಯದಲ್ಲಿ ವಿಎಒಗಳು ಸರ್ಕಾರ ಅಭಿವೃದ್ಧಿಪಡಿಸಿರುವ 21ಕ್ಕೂ ಅಧಿಕ ವೆಬ್, ಮೊಬೈಲ್ ತಂತ್ರಾಂಶಗಳನ್ನು ಬಳಸಿ ಕಾರ್ಯ ನಿರ್ವಹಿಸುತ್ತಿದ್ದರೂ ನಮ್ಮ ಹುದ್ದೆಯನ್ನು ತಾಂತ್ರಿಕ ಹುದ್ದೆಗಳೆಂದು ಪರಿಗಣಿಸಿರುವುದಿಲ್ಲ. ಏಕಕಾಲದಲ್ಲಿ ಎಲ್ಲ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿಯನ್ನು ಕಾಣಿಸಲು ಸರ್ಕಾರ ನಮ್ಮ ಮೇಲೆ ಒತ್ತಡ ತರುತ್ತಿದೆ. ಮುಖ್ಯವಾಗಿ ವಿಎಒಗಳಿಗೆ ಅವರು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಸುಸಜ್ಜಿತ ಕಚೇರಿ, ಅಗತ್ಯ ಪರಿಕರಗಳು, ಗುಣಮಟ್ಟದ ಮೊಬೈಲ್, ಪ್ರಿಂಟರ್, ಸ್ಕ್ಯಾನರ್ ಇದ್ಯಾವುದೂ ಇಲ್ಲದೇ ಕರ್ತವ್ಯ ನಿರ್ವಹಿಸಬೇಕಿದೆ. ಇದೆಲ್ಲವನ್ನೂ ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಖಜಾಂಚಿ ಶ್ರೀವತ್ಸ ಮಾತನಾಡಿ, ತಾಂತ್ರಿಕ ಸಮಸ್ಯೆಗಳು ನಮ್ಮನ್ನು ಒಂದಡೆ ಕಾಡುತ್ತಿದ್ದರೆ, ಸಾರ್ವಜನಿಕರಿಗೆ ಸಂಪರ್ಕ ಸಾಧಿಸಲು ಆಗದ ಪರಿಸ್ಥಿತಿ ಮತ್ತೊಂದೆಡೆ ಇರುತ್ತದೆ. ಸಂಜೆ 6ರ ನಂತರ ವರ್ಚುವಲ್ ಸಭೆಗಳಿಗೆ ಹಾಜರಾಗುವಂತಹ ಪರಿಸ್ಥಿತಿಯಲ್ಲಿ ಕೆಲಸದ ಒತ್ತಡ ನಮ್ಮನ್ನು ಬಾಧಿಸುತ್ತದೆ ಎಂದು ತಿಳಿಸಿದರು.

ಸರ್ಕಾರ ನೌಕರರ ಸಂಘದ ತಾಲೂಕು ಅಧ್ಯಕ್ಷ ಗೋವಿಂದೇಗೌಡ ಮುಷ್ಕರಕ್ಕೆ ಬೆಂಬಲ ನೀಡಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಮುಷ್ಕರದಲ್ಲಿ ತಾಲೂಕು ಘಟಕದ ಉಪಾಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಶಿವಕುಮಾರ್, ಸದಸ್ಯರಾದ ವಿಶಾಲ್, ತೀರ್ಥ ಗಿರಿಗೌಡ, ಚೈತ್ರ, ಪಲ್ಲವಿ, ಸೀಮಾಬಾನು ಇದ್ದರು.