ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದ ಬಲ್ಯಮೀದೇರಿರ ಐನ್ ಮನೆಯಲ್ಲಿ ಭಾರತ -ಪಾಕ್ 1965 ಮತ್ತು 1971 ರ ಎರಡು ಯುದ್ಧ ಹಾಗೂ 1985 ರ ಬ್ಲೂ ಸ್ಟಾರ್ ಆಪರೇಷನ್ ನಲ್ಲಿ ಭಾಗವಹಿಸಿದ್ದ ನಿವೃತ್ತ ಕ್ಯಾಪ್ಟನ್ ಬಲ್ಯಮೀದೇರಿರ ರಾಜು ಮೊಣ್ಣಪ್ಪ ಅವರನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದಿಂದ ಸನ್ಮಾನಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಈ ಸಂದರ್ಭ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ಆಶ್ರಯದಲ್ಲಿ ಬಲ್ಯಮೀದೇರಿರ ಐನ್ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಬಲ್ಯ ಮೀದೇರಿರ ಕುಟುಂಬದಿಂದಲೂ ಪ್ರತ್ಯೇಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅವರು ಇಂಡೋ ಪಾಕ್ ಎರಡು ಯುದ್ಧ ಹಾಗು ಪಂಜಾಬ್ ಅಮೃತ್ಸರ ಬ್ಲೂಸ್ಟಾರ್ ಆಪರೇಷನ್ ನಲ್ಲಿ ಪಾಲ್ಗೊಂಡಿದ್ದ ಯೋಧ ಹಾಗೂ ಹಿರಿಯರಾದ ಬಲ್ಯಮೀದೇರಿರ ರಾಜು ಮೊಣ್ಣಪ್ಪ ಅವರನ್ನು ಸನ್ಮಾನಿಸುತ್ತಿರುವುದು ಅದು ನಮ್ಮ ಸೌಭಾಗ್ಯ ಎಂದರು.ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ಹಿಂದಿನಿಂದಲೂ ಸರ್ಕಾರ ಗುರುತಿಸುವಲ್ಲಿ ವಿಫಲವಾಗಿದೆ. ಕೊಡವ ಜನಾಂಗದಲ್ಲಿಯೇ 262 ಕ್ಕೂ ಹೆಚ್ಚು ಮುಖಂಡರು ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅವರನ್ನು ಸರ್ಕಾರ ಗುರುತಿಸಿ ಗೌರವಿಸಬೇಕು. ಅವರು ಇಂದು ಇಲ್ಲದಿದ್ದರೂ ಅವರ ಹೆಸರು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಇರುವಂತೆ ಸ್ಮಾರಕಗಳನ್ನು ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಎರಡು ವರ್ಷಗಳ ಹಿಂದೆ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಪಟ್ಟಿಯನ್ನು ಸರ್ಕಾರ ಮಾಡಿತ್ತು. ಆದರೆ ಕೊಡಗಿನ ಪ್ರಮುಖರ ಹೆಸರನ್ನು ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಡಿಕೇರಿ ಕೋಟೆಯಲ್ಲಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಏರಿಸಿದ ಮಲ್ಲಂಡ ಚಂಗಪ್ಪ, ಹುಬ್ಬಳ್ಳಿ ಹುಲಿ ಎಂದು ಕರೆಯುತ್ತಿದ್ದ ಪಾರುವಂಗಡ ಬೆಳ್ಯಪ್ಪ, ಕೊಡಗಿನ ಗಾಂಧಿ ಅಸಹಕಾರ ಚಳುವಳಿಯ ಧೀಮಂತ ನಾಯಕ ಪಂದ್ಯಂಡ ಚಂಗಪ್ಪ, ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣತೆತ್ತ ಕೋಳೆರ ಕಾವೇರಿ, ಪೋಡಮಾಡ ಜಾನಕಿ ಪಟ್ಟಚರವಂಡ ಬೊಳಕ ಹೀಗೆ 262ಕ್ಕೂ ಹೆಚ್ಚು ಮುಖಂಡರು ತಮ್ಮ ಪ್ರಾಣತ್ಯಾಗ, ಬಲಿದಾನ, ಹೋರಾಟ, ಜೈಲುವಾಸದೊಂದಿಗೆ ಕೊಡಗಿನ ಜನರು ಬ್ರಿಟಿಷ್ ಆಡಳಿತ ವಿರುದ್ಧ ಹೋರಾಟ ನಡೆಸಿದ್ದರು. ಇವರೆಲ್ಲರನ್ನು ಮರೆತಿರುವುದು ತುಂಬಾ ಬೇಸರದ ವಿಷಯ ಎಂದು ಹೇಳಿದರು.ಕಾರ್ಯಕ್ರಮ ಸಂಚಾಲಕ ಬಲ್ಯಮೀದೇರಿರ ಸಂಪತ್ ಅವರು ಮಾತನಾಡಿ, ಹಿರಿಯರಾದ ರಾಜು ಮೊಣ್ಣಪ್ಪ ಅವರು ಭಾರತ -ಪಾಕ್ ಯುದ್ಧದಲ್ಲಿ ಪಾಕಿಸ್ತಾನದ 200 ಕಿ. ಮೀ. ಗಿಂತ ಹೆಚ್ಚು ಅಂತರದಲ್ಲಿ ಭೂಪ್ರದೇಶಕ್ಕೆ ನುಗ್ಗಿ ಯುದ್ಧ ಮಾಡಿದ್ದಾರೆ, 32 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜು ಮೊಣ್ಣಪ್ಪ ಅವರು ಸೇನೆಯಲ್ಲಿ ಸಲ್ಲಿಸುವ ಮೂಲಕ ದೇಶ ಸೇವೆ ಹಾಗೂ ಕ್ರೀಡೆ ಯಾವುದೇ ಕ್ಷೇತ್ರದಲ್ಲಿ ಸೇವೆ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡಿದರೆ ಅದು ಅವರಿಗೆ ನೀಡುವ ಗೌರವವಾಗಿದೆ. ಅದೇ ರೀತಿ ನನ್ನನ್ನು ಸನ್ಮಾನಿಸಿದ್ದು ಕೊಡಗಿನ ಯುವಕರು ಇನ್ನಷ್ಟು ಸೇನೆಗೆ ಸೇರಿ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡುವಂತೆ ಹೇಳಿದರು.ವೇದಿಕೆಯಲ್ಲಿ ಮಾಜಿ ಸೈನಿಕರ ಸಂಘದ ಸಂಚಾಲಕ ಬೊಜ್ಜಂಗಡ ಸುನಿಲ್ ಸಹ ಖಜಾಂಚಿ ಮಚ್ಚಮಾಡ ರಮೇಶ್ ಸಹಸಂಚಾಲಕ ಬೊಜ್ಜಂಗಡ ತಿಮ್ಮಯ್ಯ ಹಾಜರಿದ್ದರು.
ಕಾರ್ಯಕ್ರಮ ಸಂಚಾಲಕ ಬಲ್ಯಮೀದೇರಿರ ಸಂಪತ್ ಸ್ವಾಗತಿಸಿ ವಂದಿಸಿದರು. ಕುಟುಂಬದ ಅಧ್ಯಕ್ಷ ದಯಾನಂದ ಹಾಗೂ ಕಾರ್ಯದರ್ಶಿ ಭಾನು ಹಾಗೂ ಗ್ರಾಮಸ್ಥರು, ಮಾಜಿ ಸೈನಿಕರು ಪಾಲ್ಗೊಂಡಿದ್ದರು.