ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾಡಳಿತ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯು ನಗರದ ಕೋಟೆ ಆವರಣದಲ್ಲಿ ಮಳೆಯ ನಡುವೆ ಶುಕ್ರವಾರ ಅರ್ಥಪೂರ್ಣ ನಡೆಯಿತು.ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಸಚಿವರು, ಸ್ವಾತಂತ್ರ್ಯ ಚಳುವಳಿಯಲ್ಲಿ ಶ್ರಮಿಸಿದ ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡ, ಪಂದ್ಯಂಡ ಬೆಳ್ಯಪ್ಪ, ಸಿ.ಎಂ.ಪೂಣಚ್ಚ, ಕೊಡಂದೇರ ಪೂವಯ್ಯ, ಕೋದಂಡ ಅಪ್ಪಯ್ಯ, ಸಿ.ಎಂ.ವೆಂಕಪ್ಪಯ್ಯ, ಗುಂಡುಗುಟ್ಟಿ ಮಂಜುನಾಥಯ್ಯ, ಎಂ.ಎಂ.ಸಿದ್ದಿಕ್, ಎಚ್.ಆರ್.ಕೃಷ್ಣಯ್ಯ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಮುಕ್ಕಾಟಿರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮೊದಲಾದ ಮಹಾ ನಾಯಕರುಗಳನ್ನು ಸ್ಮರಿಸಬೇಕಿದೆ ಎಂದರು.ಬಹು ಹಿಂದಿನಿಂದಲೂ ಕೊಡಗು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ನಾಯಕರನ್ನು ಕೊಟ್ಟಿದೆ. ಅದೇ ಸಂದರ್ಭದಲ್ಲಿ ಭಾರತೀಯ ಸೈನ್ಯದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಸ್ಮರಣೀಯರನ್ನು ಸಹ ನೀಡಿದೆ. ಈ ಪೈಕಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಭಾರತೀಯ ಸೇನಾ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ರತ್ನಗಳು.
ಈ ಬಾರಿ ದೀಪಾ ಬಾಸ್ತಿ ಅವರ ಹಾರ್ಟ್ ಲ್ಯಾಂಪ್(ಎದೆಯ ಹಣತೆ) ಕಥಾ ಸಂಕಲನಕ್ಕೆ ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ದೊರೆತಿದ್ದು, ಕೊಡಗು ಜಿಲ್ಲೆಗೆ ಕೀರ್ತಿಯನ್ನು ತಂದಿದೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವ ಸರ್ಕಾರ ಕಳೆದ ಎರಡು ವರ್ಷದಲ್ಲಿ ಸಾರ್ವಜನಿಕರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತ ಕಾಪಾಡುವಲ್ಲಿ ಶ್ರಮಿಸಿದೆ.
ಗ್ಯಾರಂಟಿ ಯೋಜನೆಗಳಿಂದ ನಾಡಿನ ಜನರ ತಲಾ ಆದಾಯ ಹೆಚಾಗ್ಗಿದೆ. ಪ್ರತಿಯೊಬ್ಬರ ಕೊಳ್ಳುವ ಶಕ್ತಿ ವೃದ್ಧಿಸಿದೆ. ಬಡವರ ಸಂಖ್ಯೆ ಹಾಗೂ ಅಸಮಾನತೆ ಕಡಿಮೆಯಾಗುತ್ತಿದ್ದು, ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲೆಯ ಲೈನ್‌ಮನೆಗಳಲ್ಲಿ ವಾಸಿಸುವ ಬುಡಕಟ್ಟು ಆದಿವಾಸಿಯ 2 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಲು ಮುಂದಾಗಿದೆ. ಲೈನ್‌ಮನೆಗಳಲ್ಲಿ ವಾಸಿಸುವ ಬುಡಕಟ್ಟು ಸಮಾಜದವರಿಗೆ ವೈಜ್ಞಾನಿಕವಾಗಿ ಪಟ್ಟಿ ತಯಾರಿಸಲಾಗಿದೆ. ಈ ಬಾರಿ ಪ್ರಾಕೃತಿಕ ವಿಕೋಪವನ್ನು ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿದೆ. ಮುಂದಿನ ದಿನಗಳಲ್ಲಿಯೂ ಸಹ ಹೆಚ್ಚಿನ ಮಳೆ ಬಂದಲ್ಲಿ ಮತ್ತಷ್ಟು ಎಚ್ಚರವಹಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದರು.ಶಾಸಕರಾದ ಡಾ.ಮಂತರ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಇತರರು ಇದ್ದರು.