ಸಾರಾಂಶ
78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರ್ಕಾರದ ಶಿಷ್ಟಾಚಾರಕ್ಕೆ ಅನುಗುಣವಾಗಿ ತಾಲೂಕು ಮಟ್ಟದಲ್ಲಿ ಸಂಭ್ರಮ ಸಡಗರ ಮತ್ತು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕೊಟ್ಟೂರು
78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರ್ಕಾರದ ಶಿಷ್ಟಾಚಾರಕ್ಕೆ ಅನುಗುಣವಾಗಿ ತಾಲೂಕು ಮಟ್ಟದಲ್ಲಿ ಸಂಭ್ರಮ ಸಡಗರ ಮತ್ತು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯ ಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಸಂಪೂರ್ಣ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಹಾಜರು ಇರಲೇಬೇಕು ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ ನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದಲ್ಲಿನ ತಾಲೂಕು ಕಾರ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಪೂರ್ವಸಿದ್ಧತೆಯ ನೇತೃತ್ವ ವಹಿಸಿ ಅವರು ಬುಧುವಾರ ಮಾತನಾಡಿದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸೈನಿಕರು ಇಲ್ಲವೇ ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸಿ ತಾಲೂಕು ಆಡಳಿತದಿಂದ ಸನ್ಮಾನಿಸಬೇಕು. ವೇದಿಕೆಯಲ್ಲಿ ಅನಗತ್ಯ ಮಾತನಾಡದೆ ಸ್ವಾತಂತ್ರ್ಯೋತ್ಸವದ ಸಮಾರಂಭದ ಔಚಿತ್ಯ ವಿಷಯ ಕುರಿತು ಮಾತನಾಡಬೇಕು. ನಿರೂಪಣೆ ಹೆಸರಿನಲ್ಲಿ ಅನಗತ್ಯವಾಗಿ ಕಿರಿ-ಕಿರಿ ಉಂಟು ಮಾಡಬಾರದು ಈ ಬಗ್ಗೆ ತಾಲೂಕು ಆಡಳಿತ ತೀವ್ರ ಗಮನಿ ಹರಿಸಬೇಕು ಎಂದು ಸೂಚಿಸಿದರು.ಕವಾಯಿತು ಪ್ರದರ್ಶನದಲ್ಲಿ ಪೊಲೀಸ್‌ರೊಂದಿಗೆ ಎನ್‌ಸಿಸಿ ಗೃಹರಕ್ಷಕ ದಳ ಮತ್ತು ಆರನೇ ತರಗತಿ ನಂತರದ ಶಾಲಾ ವಿದ್ಯಾರ್ಥಿಗಳನ್ನು ಇರುವಂತಹ ತಂಡ ರಚಿತಗೊಳ್ಳಬೇಕು. ರಾಷ್ಟ್ರ ಧ್ವಜವನ್ನು ಆರೋಹಣ ಮತ್ತು ಅವರೋಹಣ ಮಾಡುವ ಕಾರ್ಯವನ್ನು ಶಿಸ್ತುಬದ್ಧ, ಶಿಷ್ಟಾಚಾರಕ್ಕೆ ಪೂರಕವಾಗಿ ಮಾಡಲು ಅಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಭಾಗವಹಿಸುವ ಪ್ರತಿಯೊಬ್ಬರಿಗೂ ತಿಂಡಿ ಆಹಾರ ಸೇವನೆ ಸೇರಿದಂತೆ ಎಲ್ಲಾ ಬಗೆಯ ವೆಚ್ಚವನ್ನು ತಾವು ಮತ್ತು ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನರೊಂದಿಗೆ ಕೂಡಿ ಭರಿಸಲಾಗುವುದು ಎಂದರು.ತಹಶೀಲ್ದಾರ್ ಅಮರೇಶ್ ಜಿ.ಕೆ. ಮಾತನಾಡಿ, ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜರೋಹಣವನ್ನು ಆ. 15ರ ಬೆಳಗ್ಗೆ 8 ಗಂಟೆಗೆ ಶಾಸಕರು ನೆರವೇರಿಸಲಿದ್ದು, ಅಷ್ಟರೊಳಗೆ ಎಲ್ಲಾ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ತಾಲೂಕು ಕ್ರೀಡಾಂಗಣದಲ್ಲಿ ಹಾಜರು ಇರಬೇಕು ಎಂದರು.
ಮುಖಂಡರಾದ ಎಂಎಂಜೆ ಶೋಬಿತ್, ಬದ್ದಿ ಮರಿಸ್ವಾಮಿ, ಎಪಿಎಂಸಿ ಸದಸ್ಯ ಪರಶುರಾಮ, ಪಿಎಸ್‌ಐ ಗೀತಾಂಜಲಿ ಸಿಂಧೆ, ಎಇಇಗಳಾದ ಕೆ. ನಾಗನಗೌಡ, ನಾಗರಾಜ ಜಗದೀಶ್ ಮತ್ತಿತರರು ಇದ್ದರು.ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು. ಸಿ.ಮ. ಗುರುಬಸವರಾಜ ನಿರೂಪಿಸಿದರು.