ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಅರಸೀಕೆರೆಯ ಜನತೆ 79ನೇ ಸ್ವಾತಂತ್ರ್ಯೋತ್ಸವವನ್ನು ಗಂಭೀರತೆ ಹಾಗೂ ಉತ್ಸಾಹದೊಂದಿಗೆ ಆಚರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೆರೆದರು.ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಹಬ್ಬದ ವಾತಾವರಣ ಸೃಷ್ಟಿಯಾಗಿ, ಎಲ್ಲೆಡೆಯೂ ಉತ್ಸವದ ಸಂಭ್ರಮ ಮನೆಮಾಡಿತ್ತು. ತಾಲೂಕು ಆಡಳಿತ, ವಿವಿಧ ಸರ್ಕಾರಿ ಇಲಾಖೆಗಳಿಂದ ಹಿಡಿದು, ನಾನಾ ಸಂಘಸಂಸ್ಥೆಗಳು, ಪ್ರಗತಿಪರ ಸಂಘಟನೆಗಳು, ಶಾಲಾ ಕಾಲೇಜುಗಳು ಮತ್ತು ಸ್ಥಳೀಯ ಸಂಸ್ಥೆಗಳು ಈ ಮಹತ್ವದ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿದವು.
ಸಾರ್ವಜನಿಕರು ಪರಸ್ಪರ ‘ವಂದೇ ಮಾತರಂ’, ‘ಭಾರತ ಮಾತಾ ಕಿ ಜೈ’ ಘೋಷಣೆಗಳೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು, ಸಿಹಿ ಹಂಚುವ ಮೂಲಕ ಸಂತೋಷ ಹಂಚಿಕೊಂಡ ದೃಶ್ಯಗಳು ಎಲ್ಲಿ ನೋಡಿದರೂ ಸಾಮಾನ್ಯವಾಗಿತ್ತು. ಅರಸೀಕೆರೆಯ ಪ್ರಮುಖ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಜೇನುಕಲ್ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಈ ಸಮಾರಂಭವನ್ನು ಆಯೋಜಿಸಿತ್ತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ನೆನೆದು, ದಾಸ್ಯದಿಂದ ಮುಕ್ತಗೊಳ್ಳುವ ಹೋರಾಟ ಸುಲಭವಲ್ಲ. 1947ರ ಆಗಸ್ಟ್ 15ರ ದಿನ ದೇಶಕ್ಕೆ ಬಂದ ಸ್ವಾತಂತ್ರ್ಯ ಅನೇಕ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ತೀವ್ರ ಸಂಗ್ರಾಮದ ಫಲ ಎಂದು ಹೇಳಿದರು. ಈ ದಿನವನ್ನು ನಾವು ಭರವಸೆಯಿಂದ, ಹೆಮ್ಮೆ ಹಾಗೂ ಕೃತಜ್ಞತೆಯ ಮನೋಭಾವದಿಂದ ಆಚರಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ಈ ಮೌಲ್ಯಗಳನ್ನು ತಲುಪಿಸುವುದು ನಮ್ಮ ಹೊಣೆಗಾರಿಕೆ ಎಂದು ಯುವಜನತೆಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರಾದ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಸ್ವಾತಂತ್ರ್ಯವು ನಾವು ಜಯಿಸಿದ ಮೊದಲ ಹಂತ. ಆದರೆ ಇಂದು ದೇಶದ ಒಗ್ಗಟ್ಟು ಹಾಗೂ ಒಕ್ಕೂಟ ವ್ಯವಸ್ಥೆಯ ಸ್ಥಿರತೆ ಅತ್ಯಗತ್ಯ ಚಾಲಕ ಶಕ್ತಿಗಳಾಗಿವೆ. ಪ್ರಸ್ತುತ ಭಾರತದೊಳಗಿನ ಹಲವು ರಾಜ್ಯಗಳ ನಡುವೆ ಗಡಿ ವಿವಾದಗಳು, ನದಿ ನೀರಿನ ಹಂಚಿಕೆ ಕುರಿತ ಚರ್ಚೆಗಳು, ರಾಜಕೀಯ ಪಕ್ಷಗಳ ಬಿನ್ನಹಗಳು ಹಾಗೂ ಪ್ರಾದೇಶಿಕ ಅಭಿಮಾನಗಳು ದೇಶದ ಐಕ್ಯತೆಯ ಮೇಲೆ ಸವಾಲು ಒಡ್ಡುತ್ತಿರುವಂತೆಯೇ ಕಾಣಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ, ಪ್ರತಿಯೊಬ್ಬ ಪ್ರಜ್ಞಾವಂತ ರಾಜಕಾರಣಿಯು ತನ್ನ ಸ್ವಹಿತ, ಪಕ್ಷದ ಲಾಭ ಅಥವಾ ವೈಯಕ್ತಿಕ ಪ್ರಭಾವಕ್ಕಿಂತ ರಾಷ್ಟ್ರದ ಒಗ್ಗಟ್ಟು ಮತ್ತು ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಪ್ರಮುಖವಾಗಿ ಪರಿಗಣಿಸಬೇಕಾಗಿದೆ.
ಸಾಮರಸ್ಯದ ಕಡೆಗೆ ದಾರಿ ತೋರುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ರಾಜಕೀಯ ಅಸ್ತ್ರಗಳನ್ನು ಬದಿಗಿಟ್ಟು, ಬುದ್ಧಿವಂತಿಕೆಯುಳ್ಳ ಹಾಗೂ ಸಹಕಾರದ ಮನೋಭಾವದಿಂದ ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಒಂದು ಭಾರತ, ಶ್ರೇಷ್ಠ ಭಾರತ ಎಂಬ ಕನಸನ್ನು ಇಂದು ನವೀಕರಿಸಿ ಮುಂದುವರೆಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ,ಎಸ್ ಅರುಣ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಶೇಖರ್, ಉಪಾಧ್ಯಕ್ಷ ಜವನಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸತೀಶ್, ಡಿವೈಎಸ್‌ಪಿ ಬಿ,ಆರ್ ಗೋಪಿ, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಬಿ ಮೋಹನ್ ಕುಮಾರ್, ತಾಲೂಕು ಶಿಕ್ಷಣ ಸಲಹಾ ಸಮಿತಿ ಸದಸ್ಯ ವೈ ಕೆ ದೇವರಾಜ್, ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಂದ ನಡೆಯಲಾದ ಪಥಸಂಚಲನ, ಸಮವಸ್ತ್ರದೊಂದಿಗೆ ಹೆಜ್ಜೆಹಿಡಿದ ವಿದ್ಯಾರ್ಥಿಗಳು, ಆರಕ್ಷಕ ಸಿಬ್ಬಂದಿ, ಹೋಂ ಗಾರ್ಡ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು ರಾಷ್ಟ್ರದ ಗೌರವವನ್ನು ಪ್ರತಿಬಿಂಬಿಸಿದವು.ಪಥಸಂಚಲನದ ನಂತರ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು, ದೇಶಭಕ್ತಿ ಗೀತೆಗಳು, ನೃತ್ಯ, ನಾಟಕಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ದೃಶ್ಯಾತ್ಮಕವಾಗಿ ಪ್ರಸ್ತುತಪಡಿಸಿದರು.