2047ಕ್ಕೆ ವಿಕಸಿತ ಭಾರತದ ಸಂಕಲ್ಪ ಹೊತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಸಾಕಾರಕ್ಕಾಗಿ ಮುನ್ನುಡಿ ಬರೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

2047ಕ್ಕೆ ವಿಕಸಿತ ಭಾರತದ ಸಂಕಲ್ಪ ಹೊತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಸಾಕಾರಕ್ಕಾಗಿ ಮುನ್ನುಡಿ ಬರೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ತಿಳಿಸಿದರು.

ಶನಿವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ತಾ.ಆಡಳಿತ, ತಾ.ಪಂಚಾಯಿತಿ, ಪುರಸಭೆ, ವಿವಿಧ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶ ಕೃಷಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಾನ ಹೊಂದಿದ್ದು, ಬಾಹ್ಯಕಾಶ ತಂತ್ರಜ್ಞಾನ, ಡಾಟಾ ಸೆಂಟರ್ ಕಮ್ಯುನಿಕೇಶನ್ ಟೆಕ್ನಾಲಜಿ ಸಹಿತ ಎಲ್ಲ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದೆ.2047ಕ್ಕೆ ವಿಕಸಿತ ಭಾರತದ ಸಂಕಲ್ಪ ಹೊತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಾಕಾರಕ್ಕಾಗಿ ಸರ್ವ ಕ್ಷೇತ್ರಗಳ ಅಭಿವೃದ್ಧಿಗಾಗಿ ತೀವ್ರ ತುಡಿತ ಹೊಂದಿ ಮುನ್ನುಡಿ ಬರೆಯುತ್ತಿದ್ದಾರೆ ಎಂದರು.

ಮೋದಿ ದೇಶದ ಪ್ರಧಾನಿ ಅಲ್ಲ, ಪ್ರಧಾನ ಸೇವಕ ಎಂದು ಹಲವು ಕಡೆಗಳಲ್ಲಿ ಬಹಿರಂಗವಾಗಿ ತಿಳಿಸಿದ್ದು, ಕಳೆದ 12 ವರ್ಷಗಳಲ್ಲಿ ಹೈ ಸ್ಪೀಡ್ ರೈಲ್ವೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನೌಕಾಪಡೆ ಬಂದರುಗಳ ಅಭಿವೃದ್ಧಿಪಡಿಸುವಂತಹ ಕಾರ್ಯಕ್ಕೆ ಹೆಚ್ಚಿನ ನಿಗಾವಹಿಸಿದ್ದಾರೆ. ಈ ಕಾರ್ಯದ ಉದ್ದೇಶ 2047ರಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ರಾಷ್ಟ್ರವಾಗಿ ಪರಿವರ್ತನೆ ಹೊಂದುವ ಜತೆಗೆ ಯುವಕರು ಎಲ್ಲ ರಂಗದಲ್ಲೂ ಮುಂದೆ ಬರಬೇಕೆಂದು ಶ್ರಮಿಸುತ್ತಿದ್ದಾರೆ ಎಂದರು.

ಸ್ವಾತಂತ್ರ್ಯ ದಿನಾಚರಣೆ ಸಾಂಕೇತಿಕವಾಗದೆ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರ ಹೋರಾಟ ಬಲಿದಾನ ಪ್ರಾಣ ತ್ಯಾಗದಿಂದ ದೊರೆತ ಸ್ವಾತಂತ್ರ್ಯ ಎಂಬುದು ಮುಂದಿನ ಪೀಳಿಗೆಗೆ ಅರಿವಾಗಬೇಕು. ಸ್ವಾತಂತ್ರ್ಯಕ್ಕೂ ಮುನ್ನ ಏಸೂರು ಕೊಟ್ಟರು ಈಸೂರು ಕೊಡೆವು ಎಂದು ತಾಲೂಕಿನ ಈಸೂರು ಗ್ರಾಮಸ್ಥರ ಹೋರಾಟ ತ್ಯಾಗ ಮತ್ತು ಬಲಿದಾನದವನ್ನು ಸ್ಮರಿಸಿಕೊಳ್ಳಬೇಕು ಎಂದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ವಾಣಿ.ಯು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಬಲಿದಾನ ಮಾಡಿದ ಮಹಾನ್ ನಾಯಕರನ್ನು ಸ್ಮರಿಸಬೇಕಾಗಿರುವುದು ಎಲ್ಲರ ಕರ್ತವವಾಗಿದೆ. 1942ರಲ್ಲಿ ಸ್ವಾತಂತ್ರ್ಯದ ಅಂತಿಮ ಘಟ್ಟವಾದ ಅಸಹಕಾರ ಚಳುವಳಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಗಳಲ್ಲಿ ಮಹತ್ತರ ಸಾಧನೆಗೈದ ತಾಲೂಕಿನ ಈಸೂರು ಗ್ರಾಮಸ್ಥರು ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಗುರುತಿಸಿಕೊಂಡಿದ್ದಾರೆ ಎಂದ ಅವರು, ಇದೀಗ ಸ್ವಾತಂತ್ರ ಎಂದರೆ ಪರಿಸರ ರಕ್ಷಿಸುವುದು, ಎಲ್ಲರನ್ನೂ ಸಮನಾಗಿ ಕಾಣುವುದು, ಪ್ರಾಮಾಣಿಕತೆಯಿಂದ ಎಲ್ಲರನ್ನು ಗೌರವಿಸುತ್ತಾ ಜೀವಿಸುವುದೇ ಮೂಲ ಉದ್ದೇಶವಾಗಿದೆ ಎಂದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಶಾಲಾ ಕಾಲೇಜು ಮಕ್ಕಳಿಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸದ ರಾಘವೇಂದ್ರ, ತಾ.ಪಂ ಇಒ ನಾಗರಾಜ್, ಡಿವೈಎಸ್ಪಿ ಕೇಶವ, ಪುರಸಭಾ ಮುಖ್ಯ ಅಧಿಕಾರಿ ಭರತ್, ಬಗರಕುಂ ಸಮಿತಿ ಸದಸ್ಯ ದಯಾನಂದ್, ಕೆಡಿಪಿ ಸದಸ್ಯ ಪುಷ್ಪ ಮಂಜುನಾಥ್, ಕೃಷಿಕ ಸಮಾಜದ ಅಧ್ಯಕ್ಷ ಹುಲ್ಮಾರ್ ಮಹೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್ ಬಸವರಾಜ್, ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಕೆಎಸ್ ಗುರುಮೂರ್ತಿ, ಸರ್ಕಾರಿ ನೌಕರರ ಸಂಘದ ತಾ.ಅಧ್ಯಕ್ಷ ಮಧುಕೇಶ್ವರ್ ಸಹಿತ ವಿವಿಧ ಇಲಾಖೆ ಅಧಿಕಾರಿಗಳು, ಆಡಳಿತ ವೃಂದದವರು, ಶಿಕ್ಷಕ ಶಿಕ್ಷಕಿಯರು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.