ಸಾರಾಂಶ
ಧಾರವಾಡ: ಸ್ವಾತಂತ್ರ‍್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ‍್ಯ ಹೋರಾಟಗಾರರ ಮೌಲ್ಯ ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜ ಹಾರಿಸುವುದು, ನಮ್ಮ ಇತಿಹಾಸ ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಜಿಲ್ಲಾಡಳಿತವು ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಅವರು, ಏಕತೆ, ಸತ್ಯಾಗ್ರಹ, ಅಹಿಂಸೆ ಹಾಗೂ ಶಾಂತಿ ಮಾರ್ಗ ಅನುಸರಿಸಿ ಸ್ವಾತಂತ್ರ‍್ಯ ಗಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಈ ಚಳವಳಿ ರೂಪಿಸಿದ ಹಿರಿಯ ಹೋರಾಟಗಾರರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.ಧಾರವಾಡ ಜಿಲ್ಲೆಯ ಮೈಲಾರ ಮಹದೇವಪ್ಪ, ಆರ್.ಆರ್. ದಿವಾಕರ್, ಉಮಾಬಾಯಿ ಕುಂದಾಪುರ, ಎನ್. ಎಸ್. ಹರಡೀಕರ್, ಕೆ.ಎಫ್. ಪಾಟೀಲ, ಗೋವಿಂದಾಚಾರ್ಯ ಅಗ್ನಿಹೋತ್ರಿ, ನರಸಿಂಹ ದಾಬಡೆ, ಡೆ. ಚನ್ನಬಸಪ್ಪ, ಸರ್.ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಸೇರಿದಂತೆ ಮೊದಲಾದ ನೇತಾರರು ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸಿದ್ದರು ಎಂದ ಅವರು, ದೇಶದ ಹೆಮ್ಮೆಯ ಸಂಕೇತವಾಗಿರುವ ರಾಷ್ಟ್ರಧ್ವಜವನ್ನು ಧಾರವಾಡದ ಗರಗ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧಪಡಿಸಿ ಇಡೀ ದೇಶಕ್ಕೆ ಒದಗಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸ್ವಾತಂತ್ರ್ಯದ ದಿನದಂದು ಮಹಾತ್ಮ ಗಾಂಧೀಜಿಯವರ “ಮನುಷ್ಯರಾಗಿ ನಮ್ಮ ದೊಡ್ಡ ಸಾಮರ್ಥ್ಯವೆಂದರೆ, ಜಗತ್ತನ್ನು ಬದಲಾಯಿಸುವುದು ಅಲ್ಲ, ಬದಲಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು” ಎಂಬ ಮಾತುಗಳನ್ನು ನಾವೆಲ್ಲರೂ ಪಾಲಿಸೋಣ. ದೇಶದ ಪ್ರಗತಿಗೆ ಕೊಡುಗೆ ನೀಡಲು ಪಣ ತೊಡೊಣ ಹಾಗೂ ಬಲಿಷ್ಠ ಭಾರತದ ಕನಸನ್ನು ಜೀವಂತವಾಗಿರಿಸೋಣ ಎಂದರು.ಸಚಿವ ಲಾಡ್ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ಜನಪರ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸರ್ಕಾರದ ಸಾಧನೆಗಳನ್ನು ಲಾಡ್ ಹೇಳಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಎಸ್ಪಿ ಗುಂಜನ ಆರ್ಯ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪವಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಹಲವರಿದ್ದರು.ಪಥ ಸಂಚಲನ:ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವದಲ್ಲಿ ವಿವಿಧ ಇಲಾಖೆಗಳ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ಪ್ರಸ್ತುತ ಪಡಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ತುಕಡಿ, ಪೊಲೀಸ್ ಆಯುಕ್ತರ ಮಹಿಳಾ ತಂಡ, ಗೃಹ ರಕ್ಷಕ ದಳ, ಅಗ್ನಿ ಶಾಮಕ ಇಲಾಖೆ ಸೇರಿದಂತೆ ಹಲವು ತಂಡಗಳು ಭಾಗವಹಿಸಿದ್ದವು.
ಸಾಧಕರಿಗೆ ಸನ್ಮಾನ: ಸ್ವಾತಂತ್ರ್ಯೋತ್ಸವ ನಿಮಿತ್ತ ಜಿಲ್ಲಾಡಳಿತದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಿದರು. ಸಿಪಿಐ ಮುರುಗೇಶ ಚನ್ನಣ್ಣವರ, ಅಮನ್ ಶಾನಭಾಗ, ಭೂಮಿಕಾ ಬನ್ನಿಕೊಪ್ಪ ಮತ್ತು ಬಿಬಿ ಫಾತೀಮಾ ಮಹಿಳಾ ಸಂಘ, ರಾಜೇಶ್ವರಿ ಮಂಜುನಾಥ ಪವಾಡಿ, ಶ್ರೀಧರ ಸಾಹುಕಾರ, ಮಂಜುನಾಥ ಹಿರೇಮಠ, ಡಾ. ಸಂತೋಷ ಮಠಪತಿ, ಡಾ. ಶಿವಾನಂದ ಹೊರಕೇರಿ, ಪ್ರಲ್ಹಾದಗೌಡ ಗೊಲ್ಲಗೌಡರ, ಸುನಿಲಕುಮಾರ ಕಮ್ಮಾರ, ಚಂದ್ರು ಕೊಲಕಾರ, ಕೆ.ಪಿ. ಸುರೇಶ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕನ್ನಡಪ್ರಭ ಹಿರಿಯ ಛಾಯಾಗ್ರಾಹಕ ಬಸವರಾಜ ಅಳಗವಾಡಿ, ಮೋಹನ ಹೆಗಡೆ, ಗುರುರಾಜ ಜಮಖಂಡಿ, ಮಂಜುನಾಥ ಅಂಗಡಿ, ನಿಜಗುಣಿ ದಿಂಡಲಕೊಪ್ಪ, ರವೀಶ ಪವಾರ, ಕೇದಾರನಾಥ, ಪರಮೇಶ್ವರ ಅಂಗಡಿ, ಪ್ರಶಾಂತ ದಿನ್ನಿ, ಮಂಜುನಾಥ ಯಡಳ್ಳಿ, ವಿಠ್ಠಲ ಕರಡಿಗುಡ್ಡ, ಗುರುನಾಥ ಕಟ್ಟಿಮನಿ ಅವರನ್ನು ಗೌರವಿಸಲಾಯಿತು.