ಸಾರಾಂಶ
ಧಾರವಾಡ: ಜಿಲ್ಲೆಯಲ್ಲಿ ಆ.15ರ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಯೋಜಿಸಬೇಕು. ಆ.14ರ ಸಂಜೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ಸ್ವಾತಂತ್ರ್ಯೋತ್ಸವದ ಸಾರ್ಥಕತೆಯನ್ನು ಬಿಂಬಿಸುವ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಿಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು. ನಮಗೆ ಸ್ವಾತಂತ್ರ್ಯ ದೊರಕಿದ ಘಳಿಗೆ ಸ್ಮರಿಸಲು ಆ. 14ರ ಸಂಜೆ 6 ಗಂಟೆಯಿಂದ ಮಧ್ಯ ರಾತ್ರಿ 12ರ ವರೆಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಹಾನಗರದ ಎಲ್ಲ ಕಾಲೇಜು ಹಾಗೂ ವಿವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಬೇಕು. ಪ್ರತಿ ಕಾಲೇಜು ಸ್ವಾತಂತ್ರ್ಯ ಸ್ಮರಿಸುವ ಕಾರ್ಯಕ್ರಮ ನೀಡಬೇಕೆಂದು ಸೂಚಿಸಿದರು.
ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ, ಸಂವಿಧಾನದ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮನಮುಟ್ಟುವಂತೆ ಅರಿವು ಮೂಡಿಸಬೇಕಾಗಿದೆ. ಜಗತ್ತಿನ ಅತೀ ಶ್ರೇಷ್ಠ ಸಂವಿಧಾನ ಮತ್ತು ಸಂಸದೀಯ ವ್ಯವಸ್ಥೆ ಹೊಂದಿರುವ ನಾವು ನಮ್ಮ ಯುವಕರಿಗೆ ಸ್ವಾತಂತ್ರ್ಯದ ಇತಿಹಾಸ ಮನವರಿಕೆ ಮಾಡುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ಆಯೋಜನೆಯಾಗಬೇಕು ಎಂದು ಅವರು ತಿಳಿಸಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸ್ವಾತಂತ್ರೋತ್ಸವದ ಯುವ ಸಂಭ್ರಮ-2025 ಎಂಬ ವಿನೂತನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆ. 14ರಂದು ಮಹಾನಗರ ವ್ಯಾಪ್ತಿಯ ವಿವಿಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಆ.15ರ ಬೆಳಗ್ಗೆ 7.30ಗಂಟೆಗೆ ಎಲ್ಲ ಶಾಲೆ, ಕಾಲೇಜು, ಸಂಘ ಸಂಸ್ಥೆ ಹಾಗೂ ಸರಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರುತ್ತದೆ. 8.30ಗಂಟೆಗೆ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಸಮಾವೇಶಗೊಳ್ಳುತ್ತಾರೆ. 9 ಗಂಟೆಗೆ ಮುಖ್ಯ ಅತಿಥಿಗಳಿಂದ ಧ್ವಜಾರೋಹಣ ಹಾಗೂ ವಿವಿಧ ದಳಗಳ ವೀಕ್ಷಣೆ ನಡೆಯುತ್ತದೆ. ವಿವಿಧ ದಳಗಳಿಂದ ಗೌರವರಕ್ಷೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಆ. 14ರಿಂದ 16ರ ವರೆಗೆ ಎಲ್ಲ ಸರ್ಕಾರಿ ಕಟ್ಟಡಗಳ ಹಾಗೂ ಸಾರ್ವಜನಿಕ ಮುಖ್ಯ ವ್ಯತ್ತಗಳಲ್ಲಿ ದೀಪಾಲಂಕಾರ ಮಾಡಲಾಗುವುದು. ಸರ್ಕಾರಿ ನೌಕರರ ಹಾಜರಾತಿಯನ್ನು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪಡೆದು ಮರುದಿನ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಂಸ್ಕೃತಿಕ ಹಾಗೂ ಕಲಾ ತಜ್ಞರು ಭಾಗವಹಿಸಿದ್ದರು.