ಮುಗಿಲೆತ್ತರಕ್ಕೆ ಹಾರಲಿ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ. ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ದೇಶಭಕ್ತಿಯ ಭಾವನೆ ಮತ್ತಷ್ಟು ಗಟ್ಟಿಗೊಳಿಸಬೇಕು.

ಧಾರವಾಡ:

ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಭವ್ಯ ರಾಷ್ಟ್ರಧ್ವಜದ ಮೆರವಣಿಗೆ ಬುಧವಾರ ನಗರದಲ್ಲಿ ನಡೆಯಿತು.

ನಗರದ ಶಿವಾಜಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮಹಾರಾಣಾ ಪ್ರತಾಪ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ ಮಾರ್ಗವಾಗಿ ಸಾಗಿ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಮುಕ್ತಾಯಗೊಂಡಿತು. ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ದೇಶಭಕ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು “ವಂದೇ ಮಾತರಂ”, “ಭಾರತ್ ಮಾತಾ ಕೀ ಜೈ” ಘೋಷಣೆ ಮೊಳಗಿಸಿ ದೇಶಭಕ್ತಿಯ ವಾತಾವರಣ ನಿರ್ಮಿಸಿದರು. ತ್ರಿವರ್ಣ ಧ್ವಜದೊಂದಿಗೆ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.

ಈ ವೇಳೆ ಮಾತನಾಡಿದ ಮುಖಂಡರು, “ಮುಗಿಲೆತ್ತರಕ್ಕೆ ಹಾರಲಿ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ. ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ದೇಶಭಕ್ತಿಯ ಭಾವನೆ ಮತ್ತಷ್ಟು ಗಟ್ಟಿಗೊಳಿಸಬೇಕು ಎಂದರು.

ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು, ಕುಟುಂಬದೊಂದಿಗೆ ದೇಶಭಕ್ತಿಯ ಕ್ಷಣಗಳನ್ನು ಸಂಭ್ರಮಿಸುವುದು ಹಾಗೂ ಯುವಜನರಲ್ಲಿ ರಾಷ್ಟ್ರಪ್ರೇಮದ ಸ್ಫೂರ್ತಿ ಮೂಡಿಸುವುದು ಹರ್ ಘರ್ ತಿರಂಗಾ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಜ್ಯೋತಿ ಪಾಟೀಲ, ಉಪ ಮೇಯರ್‌ ರತ್ನಭಾಯಿ ನಾಝರೆ, ಸೀಮಾ ಮಸೂತಿ, ಶಂಕರ ಶಿಳಕೆ, ಮಂಜುನಾಥ ಮಲ್ಲಿಗವಾಡ, ಬಸವರಾಜ ಗರಗ ಹಾಗೂ ಪಕ್ಷದ ಕಾರ್ಯಕರ್ತರಿದ್ದರು.