ಸಾರಾಂಶ
ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಹುತಾತ್ಮರಾದ ಅಸಂಖ್ಯಾತ ಮಹನೀಯರುಗಳ ಆದರ್ಶಗಳು, ಅವರ ಅಭಿಮಾನದ ಕಿಚ್ಚನ್ನು ನಾವುಗಳು ಮೈಗೂಡಿಸಿ ಕೊಳ್ಳಬೇಕಾಗಿದೆ. ಸ್ವಾತಂತ್ರ್ಯದ ಮಹತ್ವದ ಜೊತೆಗೆ ನಾಗರಿಕರಾದ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ನಾವುಗಳು ಅರ್ಥ ಮಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯನ್ನು ಇಡಬೇಕಾಗಿದೆ. ಎಲ್ಲಿಯವರೆಗೆ ದೇಶದ ಪ್ರಜೆಗಳಿಗೆ ಸ್ವಾತಂತ್ರ‍್ಯ ಇರುತ್ತದೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಇಂದಿನ ಭವ್ಯ ಭಾರತವೇ ಸಾಕ್ಷಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಹುತಾತ್ಮರಾದ ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸುವ ಹಾಗೂ ಗೌರವಿಸುವುದು ಭಾರತೀಯರ ಪಾಲಿಗೆ ಮಹತ್ವದ ದಿನವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಹುತಾತ್ಮರಾದ ಅಸಂಖ್ಯಾತ ಮಹನೀಯರುಗಳ ಆದರ್ಶಗಳು, ಅವರ ಅಭಿಮಾನದ ಕಿಚ್ಚನ್ನು ನಾವುಗಳು ಮೈಗೂಡಿಸಿ ಕೊಳ್ಳಬೇಕಾಗಿದೆ. ಸ್ವಾತಂತ್ರ್ಯದ ಮಹತ್ವದ ಜೊತೆಗೆ ನಾಗರಿಕರಾದ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ನಾವುಗಳು ಅರ್ಥ ಮಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯನ್ನು ಇಡಬೇಕಾಗಿದೆ. ಎಲ್ಲಿಯವರೆಗೆ ದೇಶದ ಪ್ರಜೆಗಳಿಗೆ ಸ್ವಾತಂತ್ರ‍್ಯ ಇರುತ್ತದೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಇಂದಿನ ಭವ್ಯ ಭಾರತವೇ ಸಾಕ್ಷಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಇಂದು ನಮ್ಮ ದೇಶ ಪ್ರಪಂಚದಾದ್ಯಂತ ಸದೃಢ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಂತಹ ಸುದೀರ್ಘ, ಲಿಖಿತ ಪ್ರಜಾಪ್ರಭುತ್ವವನ್ನು ದೇಶಕ್ಕೆ ನೀಡುವಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿಶ್ರಮ ಮತ್ತು ಪಾತ್ರ ವನ್ನು ಈ ಸಂದರ್ಭದಲ್ಲಿ ಅವಶ್ಯಕವಾಗಿ ನೆನೆಯಲೇಬೇಕು ಎಂದರು. ವಾಸ್ತುಶಿಲ್ಪದ ತವರೂರಾಗಿರುವ ಬೇಲೂರನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದು ಕರೆ ನೀಡಿದರು. ಪುರಸಭೆ ಅಧ್ಯಕ್ಷೆ ಉಷಾ, ಹಳೇಬೀಡು, ಬೇಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಯೈದ್ ತೌಫಿಕ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಕಟ್ಟಾಪ ಶಿಗ್ಗಾಂವಿ, ಸದಸ್ಯರಾದ ತೀರ್ಥಕುಮಾರಿ, ಬಿ.ಎ.ಜಮಾಲೂದ್ದೀನ್, ಭರತ್, ಕೆಡಿಪಿ ಸದಸ್ಯರಾದ ಸೌಮ್ಯ, ಜ್ಯೋತಿ,ಪೊಲೀಸ್ ನಿರೀಕ್ಷಕ ರೇವಣ್ಣ, ವೃತ್ತ ನಿರೀಕ್ಷಕ ಜಗದೀಶ್, ಶಿರಾಸ್ತೀದಾರ್ ತನ್ವಿರ್ ಅಹಮ್ಮದ್, ಕಂದಾಯ ನಿರೀಕ್ಷಕ ನಟರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.