ಸ್ವಾತಂತ್ರೋತ್ಸವ ಆಚರಣೆಯಲ್ಲ ಸಂಕಲ್ಪದ ದಿನ: ಸ್ಟೆಲ್ಲಾ ವರ್ಗೀಸ್

| Published : Aug 16 2025, 12:03 AM IST

ಸ್ವಾತಂತ್ರೋತ್ಸವ ಆಚರಣೆಯಲ್ಲ ಸಂಕಲ್ಪದ ದಿನ: ಸ್ಟೆಲ್ಲಾ ವರ್ಗೀಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಿಲ್ಲೆ ಮೈದಾನದ ಮಂಗಲ್‌ಪಾಂಡೆ ಚೌಕಿಯಲ್ಲಿ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕುಮಟ್ಟದ ೭೯ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಹಿರಿಯರ ತ್ಯಾಗ ಬಲಿದಾನ ಶೌರ್ಯದ ಸಂಕೇತವಾಗಿ ನಾವಿಂದು ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದು, ಇದು ಕೇವಲ ಆಚರಣೆಯ ದಿನವಲ್ಲ, ಸಂಕಲ್ಪದ ದಿನವಾಗಿದೆ. ಸ್ವಾತಂತ್ರ್ಯದ ಬೆಲೆಯನ್ನು ಅರಿತು ಅದನ್ನುಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು.ಅವರು ಶುಕ್ರವಾರ ಕಿಲ್ಲೆ ಮೈದಾನದ ಮಂಗಲ್‌ಪಾಂಡೆ ಚೌಕಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ತಾಲೂಕುಮಟ್ಟದ ೭೯ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.ಪ್ರಗತಿಯಲ್ಲಿ ಭಾರತವು ಅತ್ಯುನ್ನತ ಶಕ್ತಿಯಾಗಿ ಮೆರೆಯುತ್ತಿದೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಅವರಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವುದರೊಂದಿಗೆ ಸನ್ಮಾರ್ಗದ ದಾರಿಯಲ್ಲಿ ಮುನ್ನಡೆಸಿ ಅದಕ್ಕೆ ಪೂರಕವಾದ ಅರಿವು ನೀಡಿ ಉನ್ನತ ಮೌಲ್ಯವನ್ನು ಅವರು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಇಂದಿನ ಶ್ರಮವೇ ಅವರಲ್ಲಿನಾಳಿನ ಭವಿಷ್ಯ ರೂಪಿಸುತ್ತದೆ ಎಂದರು.ಪುತ್ತೂರು ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಅಶೋಕ್ ರೈ, ಹಿರಿಯರು ದೇಶದ ಸ್ವ-ಆಡಳಿತದ ಹಕ್ಕಿಗಾಗಿ ಹೋರಾಡಿ ತ್ಯಾಗ ಬಲಿದಾನ ಗೈದಿದ್ದು, ಅವರನ್ನು ಸ್ಮರಿಸುವ ಮತ್ತು ಗೌರವಿಸುವ ದಿನವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪೂಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಚಿನ್ಮಯಿ ಎಲ್., ಪ್ರಜ್ಞಾ ನಿಡ್ವಣ್ಣಾಯ, ಅನಘಾ ಶೆಟ್ಟಿ, ಅನುಶ್ರೀ, ಯುಕ್ತಾಶ್ರೀ ಅವರನ್ನು ಪುರಸ್ಕರಿಸಲಾಯಿತು. ನಿವೃತ್ತ ಯೋಧರಾದ ತುಳಸೀದಾಸ್ ಪಿಲಿಂಜ ಮತ್ತು ಭಾಸ್ಕರ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಪುತ್ತೂರು ನಗರಠಾಣೆಯ ಸಬ್‌ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ರಝಾಕ್ ಬಪ್ಪಳಿಗೆ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆಸಲಾದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪೊಲೀಸ್ ಇಲಾಖೆ, ಗೃಹರಕ್ಷಕದಳ, ಅಗ್ನಿಶಾಮಕದಳ, ಎನ್‌ಸಿಸಿ ಮತ್ತು ಎನ್‌ಪಿಸಿ, ಸ್ಕೌಟ್ಸ್ ಆ್ಯಂಡ್‌ ಗೈಡ್ಸ್, ಬ್ಯಾಂಡ್ ಸೆಟ್ ಮೂಲಕ ಗೌರವರಕ್ಷೆ ಮತ್ತು ಪಥಸಂಚಲನ ನಡೆಯಿತು.ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಡಿವೈಎಸ್ಪಿ ಅರುಣ್ ನಾಗೇಗೌಡ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಎಸ್.ಬಿ. ಕೂಡಲಗಿ, ನಗರಸಭೆಯ ಪೌರಾಯುಕ್ತೆ ವಿದ್ಯಾ ಎಸ್. ಕಾಳೆ ಉಪಸ್ಥಿತರಿದ್ದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಸಾಂಸ್ಕೃತಿಕ ಸಂಚಾಲಕರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ಲೋಕೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.