ಸಾರಾಂಶ
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಕಾರ್ಯಕ್ರಮ ಅದ್ಧೂರಿ ಆಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹುಟ್ಟಿದ ದಿನವನ್ನು ಆಅಗಸ್ಟ್ 20ರಂದು ಆಚರಿಸಲು ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ನೇತೃತ್ವದಲ್ಲಿ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
- ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಿದ್ಧತಾ ಸಭೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಕಾರ್ಯಕ್ರಮ ಅದ್ಧೂರಿ ಆಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹುಟ್ಟಿದ ದಿನವನ್ನು ಆಗಸ್ಟ್ 20ರಂದು ಆಚರಿಸಲು ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ನೇತೃತ್ವದಲ್ಲಿ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಮಾತನಾಡಿ, ಪ್ರತಿವರ್ಷ ಕೇವಲ ಶಾಲಾ ಮಕ್ಕಳು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಮಾತ್ರ ಕಾರ್ಯಕ್ರಮದಿಂದ ದೂರ ಉಳಿಯುತ್ತಿದ್ದಾರೆ. ಈ ಬಾರಿಯಾದರೂ ಸಾರ್ವಜನಿಕರೂ ಪಾಲ್ಗೊಳ್ಳುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ರಾಜು ಕಣಗಣ್ಣಾರ್ ಮಾತನಾಡಿ, ನಸುಕಿನಲ್ಲೇ ಮಕ್ಕಳು ಶಾಲೆಗೆ ಬಂದಿರುತ್ತಾರೆ. ತಾಲೂಕು ಕ್ರೀಡಾಂಗಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಿ ಎಂದು ಉಪವಿಭಾಧಿಕಾರಿಗಳಿಗೆ ಮನವಿ ಮಾಡಿದರು. ಈ ಬಗ್ಗೆ ಎಲ್ಲ ಸಾಧಕ- ಬಾಧಕಗಳನ್ನು ನೋಡಿಕೊಂಡು ವ್ಯವಸ್ಥೆ ಮಾಡಲಾಗುವುದು. ಬಿಇಒ, ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಈ ಕುರಿತು ಚರ್ಚಿಸಲಾಗುವುದು ಎಂದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರದ ದೇಶಭಕ್ತಿಯ ಗೀತೆಗಳನ್ನಷ್ಟೇ ಹಾಡಿಗೆ ನೃತ್ಯ ಮಾಡಿಸಬೇಕು. ಯವುದೇ ಕಾರಣಕ್ಕೂ ಅನ್ಯಭಾಷೆಗಳ ಗೀತೆಗಳಿಗೆ ಅವಕಾಶ ಕೊಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ದೀನ ದಲಿತರ ಉದ್ಧಾರಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದವರು ಧೀಮಂತ ವ್ಯಕ್ತಿ, ಮಾಜಿ ಮುಖ್ಯಮಂತ್ರಿ ದಿ।। ಡಿ.ದೇವರಾಜ್ ಅರಸು. ಆಗಸ್ಟ್ 20 ಅವರ ಜನ್ಮದಿನವಾಗಿದ್ದು, ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು. ಬಳಿಕ ಪಟ್ಟಣದ ಗುರುಭವನದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಮನವಿ ಮಾಡಿದರು.ಆಗ, ಗುರು ಭವನದಲ್ಲಿ ಕಾರ್ಯಕ್ರಮ ಮಾಡುವ ಬದಲು ನಗರದ ಹೃದಯಭಾಗದ ಕನಕದಾಸ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲು ಅನೇಕ ಮುಖಂಡರು ಸಲಹೆ, ಮನವಿ ಮಾಡಿದರು. ಆಗ ಎಸಿ ಅವರು ಬಿಸಿಎಂ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ತಹಸೀಲ್ದಾರ್ ಪಟ್ಟರಾಜಗೌಡ, ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್, ಬಿಸಿಎಂ ಅಧಿಕಾರಿ ಮೃತ್ಯುಂಜಯ, ತುಂಗಾ ಮೇಲ್ದಂಡೆ ಯೋಜನೆ ಎಇಇ ಮಂಜುನಾಥ್, ಬೆಸ್ಕಾಂ ಎಇಇ ಜಯಪ್ಪ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಸಿಡಿಪಿಒ ಜ್ಯೋತಿ, ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ, ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ, ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ಮಾಜಿ ಸೈನಿಕ ಎಂ.ವಾಸಪ್ಪ, ದಲಿತ ಸಂಘಟನೆ ಪ್ರಮುಖರಾದ ತಮ್ಮಣ್ಣ, ಮಾರಿಕೊಪ್ಪ ಮಂಜಪ್ಪ, ಕೆಂಚಿಕೊಪ್ಪ ಮಂಜುನಾಥ್, ಸೊರಟೂರು ಹನುಮಂತಪ್ಪ, ಕನ್ನಡಪರ ಸಂಘಟನೆಯ ಪ್ರಮುಖರಾದ ವಿನಯ್ ವಗ್ಗರ್, ಮಂಜು ಇತರರು ಭಾಗವಹಿಸಿದ್ದರು.- - - -2ಎಚ್.ಎಲ್.ಐ2:
ಸ್ವಾತಂತ್ರ್ಯ ದಿನಾಚರಣೆ ಹಾಗೂ ಮಾಜಿ ಸಿಎಂ ಡಿ.ದೇವರಾಜ ಅರಸು ಜನ್ಮ ದಿನ ಕಾರ್ಯಕ್ರಮಗಳ ಆಚರಣೆ ಸಲುವಾಗಿ ಶುಕ್ರವಾರ ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.