ಸ್ವಾತಂತ್ರ್ಯ ಅನೇಕ ಮಹನೀಯರ ಹೋರಾಟದ ಫಲ

| Published : Aug 16 2025, 02:01 AM IST

ಸಾರಾಂಶ

ಸ್ವಾತಂತ್ರ್ಯ ಹೋರಾಟವು ಕೇವಲ ಪರಕೀಯ ಆಳ್ವಿಕೆಯಿಂದ ಬಿಡುಗಡೆಯಾಗಿರಲಿಲ್ಲ

ಕುಂದಗೋಳ: ಸ್ವಾತಂತ್ರ್ಯೋತ್ಸವ ಆಚರಿಸುವ ಪ್ರಮುಖ ಉದ್ದೇಶವೇ ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ ಮತ್ತು ನಮ್ಮ ಹಿರಿಯರ ತ್ಯಾಗದ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ರಾಜು ಮಾವರಕರ ಮಾತನಾಡಿ, ಸ್ವಾತಂತ್ರ್ಯ ಹೋರಾಟವು ಕೇವಲ ಪರಕೀಯ ಆಳ್ವಿಕೆಯಿಂದ ಬಿಡುಗಡೆಯಾಗಿರಲಿಲ್ಲ, ಅದು ನಮ್ಮ ಗುರುತು, ಘನತೆ ಮತ್ತು ಸಮಾನ ಹಕ್ಕುಗಳಿಗಾಗಿ ನಡೆಸಿದ ಹೋರಾಟವಾಗಿತ್ತು. ಆ ಮಹನೀಯರ ತ್ಯಾಗ ಸ್ಮರಿಸುತ್ತ, ಸಂವಿಧಾನದ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಮೌಲ್ಯ ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು. ಪೌರಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ಅಂಗವಿಕಲರಿಗೆ ಚೇರ್ ವಿತರಣೆ ಮಾಡಲಾಯಿತು.

ಪಪಂ ಅಧ್ಯಕ್ಷ ಶ್ಯಾಮಸಂದ್ರ ದೇಸಾಯಿ, ಉಪಾಧ್ಯಕ್ಷ ಮಂಜು ಹಿರೇಮಠ, ತಾಪಂ ಇಒ ಜಗದೀಶ್ ಕಮ್ಮಾರ್, ಸಿಪಿಐ ಶಿವಾನಂದ ಅಂಬೆಗೇರ್, ಶಿವಾನಂದ ಬೆಂತೂರ, ಡಾ. ಅರವಿಂದ ಕಟಗಿ, ಬಸವರಾಜ್ ಶಿರಸಂಗಿ ಇತರರು ಇದ್ದರು.