ಇ-ಆಫೀಸ್‌ ತಂತ್ರಾಂಶ ಬಳಕೆಯಲ್ಲಿ ಇಂಡಿ ಪ್ರಥಮ

| Published : Jan 01 2024, 01:15 AM IST

ಸಾರಾಂಶ

ಪಾರದರ್ಶಕ, ಕಾಗದ ರಹಿತ ಆಡಳಿತ, ಕಡತ ನಿರ್ವಹಣೆ, ತ್ವರಿತಗತಿ ವಿಲೇವಾರಿ, ಕಡತ ಕಣ್ಮರೆ ತಡೆ, ತಿದ್ದುಪಡಿ ಸಮಸ್ಯೆ ಸೇರಿದಂತೆ ಇತರ ಉದ್ದೇಶಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಇ -ಆಫೀಸ್‌ ತಂತ್ರಾಂಶ ಬಳಕೆಯಲ್ಲಿ ಜಿಲ್ಲೆಯ ಇತರೆ ತಾಲೂಕಿಗಳಿಗಿಂತ ಇಂಡಿ ತಹಸೀಲ್ದಾರ ಕಚೇರಿ ಮುಂದೆ ಸಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಪಾರದರ್ಶಕ, ಕಾಗದ ರಹಿತ ಆಡಳಿತ, ಕಡತ ನಿರ್ವಹಣೆ, ತ್ವರಿತಗತಿ ವಿಲೇವಾರಿ, ಕಡತ ಕಣ್ಮರೆ ತಡೆ, ತಿದ್ದುಪಡಿ ಸಮಸ್ಯೆ ಸೇರಿದಂತೆ ಇತರ ಉದ್ದೇಶಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಇ -ಆಫೀಸ್‌ ತಂತ್ರಾಂಶ ಬಳಕೆಯಲ್ಲಿ ಜಿಲ್ಲೆಯ ಇತರೆ ತಾಲೂಕಿಗಳಿಗಿಂತ ಇಂಡಿ ತಹಸೀಲ್ದಾರ ಕಚೇರಿ ಮುಂದೆ ಸಾಗಿದೆ. 2023 ಅಗಷ್ಟ 1 ರಿಂದ 2023 ಡಿಸೆಂಬರ 30ರ ಅವಧಿಯಲ್ಲಿ 740 ಇ-ಫೈಲ್‌ ಕ್ರಿಯೇಟ್‌ ಮಾಡಿ, 2658 ಫೈಲ್‌ ಮುಂದೆ ಸಾಗಿಸಿ, 1091 ಇ-ಸ್ವೀಕೃತಿ ಕ್ರಿಯೇಟ್‌ ಮಾಡಿ, 3774 ಇ-ಸ್ವೀಕೃತಿ ಮುಂದೆ ಸಾಗಿಸಿದ್ದಾರೆ. ಇದರಿಂದ ಸರ್ಕಾರದ ಮಹತ್ತರ ಯೋಜನೆಗಳ ಲಾಭ ಜನರಿಗೆ ಸಿಗುವಂತಾಗಿದೆ.ಇಲ್ಲಿನ ತಹಸೀಲ್ದಾರ ಹಾಗೂ ಅಧಿಕಾರಿಗಳ ಇಚ್ಛಾಸಕ್ತಿಯಿಂದ ನಾಗರಿಕರು ಸರ್ಕಾರಿ ಇಲಾಖೆಗಳಿಗೆ ಅಲೆದಾಟ ತಪ್ಪಿಸಲು ಮತ್ತು ತ್ವರಿತ ಕಾರ್ಯ ನಿರ್ವಹಿಸಲು ಸರ್ಕಾರ ಜಾರಿಗೆ ತಂದಿರುವ ಇ-ಆಡಳಿತವನ್ನು ಇಂಡಿ ತಹಸೀಲ್ದಾರ ಕಚೇರಿ ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ ಹಲವು ತಾಲೂಕು ಮಟ್ಟದ ಕಚೇರಿಗಳಲ್ಲಿ ಈಗಾಗಲೆ ಇ-ಆಫೀಸ್‌ ತಂತ್ರಾಂಶದ ಮೂಲಕ ಪರಿಣಾಮಕಾರಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಕೆಲ ಕಚೇರಿಗಳಲ್ಲಿ ಇನ್ನೂ ಇ-ಆಫೀಸ್‌ ಪರಿಣಾಮಗಾರಿ ಅನುಷ್ಠಾನ ಆಗಬೇಕಿದೆ. ಸದ್ಯ ಕಂದಾಯ ಇಲಾಖೆಯ ತಹಸೀಲ್ದಾರ ಕಚೇರಿಯಲ್ಲಿ ತಂತ್ರಾಂಶ ಅಳವಡಿಕೆಯಾಗಿದ್ದು, ಆ ಮೂಲಕ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.ಆರಂಭದಲ್ಲಿ ಸ್ಕ್ಯಾನ್‌ ಮಾಡಿ ಇ-ಆಫೀಸ್‌ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಬೇಕು. ನಂತರ ಸ್ಕ್ಯಾನ ಆದ ಪ್ರತಿಗಳು ಮುಂದಿನ ಕಾರ್ಯಕ್ಕೆ ರವಾನೆಯಾಗುತ್ತದೆ. ಪ್ರಸ್ತುತ ಕಡತ ಯಾರ ಬಳಿ, ಯಾವ ಹಂತದಲ್ಲಿ ಇವೆ, ಎಷ್ಟು ದಿನಗಳಿಂದ ಉಳಿದಿವೆ ಎಂಬ ಮುಂತಾದ ಮಾಹಿತಿಯನ್ನು ಕುಳಿತಲ್ಲೇ ನೋಡಬಹುದು. ಇದರಿಂದ ಮೇಲಾಧಿಕಾರಿಗಳು ಸಂಬಂಧಪಟ್ಟವರಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಕುಳಿತಲ್ಲಿಯೇ ಮಾಡಲು ಸಹಾಯಕವಾಗಿದೆ.ಈ ಮೊದಲು ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರ ಹಿಡಿದು ಅಲೆದಾಡುವ ಪರಿಸ್ಥಿತಿ ಇತ್ತು. ಒಮ್ಮೊಮ್ಮೆ ಕಡತ ನಾಪತ್ತೆಯಾಗಿ ವರ್ಷಗಳೇ ಕಳೆದರೂ ಸಿಗದ ಹಲವು ಉದಾಹರಣೆಗಳು ಇವೆ. ಈ ಸಮಸ್ಯೆ ದೂರಮಾಡಲು ತಂತ್ರಾಂಶ ಅಳವಡಿಸಲಾಗಿದೆ. ಇದರಿಂದ ಸರ್ಕಾರಿ ಸೇವೆಗಳ ವಿತರಣೆ ಹಾಗೂ ದಕ್ಷತೆ ಸುಧಾರಿಸುತ್ತದೆ. ಭ್ರಷ್ಟಾಚಾರ ಕಡಿಮೆಯಾಗಿ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿದೆ.

ಕೋಟ್

ಈ ಮೊದಲು ಸರ್ಕಾರದ ಯೋಜನೆಗಳ ಪ್ರಯೋಜ ಪಡೆಯಲು ಸರ್ಕಾರಿ ಕಚೇರಿಗಳ ಎದುರು ದಿನವಿಡೀ ಕ್ಯೂ ನಿಲ್ಲಬೇಕಾಗಿತ್ತು. ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ, ಈಗ ಇ-ಆಡಳಿತ ಸೌಲಭ್ಯದಿಂದ ಜನರಿಗೆ ಅನುಕೂಲವಾಗಿದೆ. ಅವರ ಹಣ ಹಾಗೂ ಸಮಯ ಉಳಿತಾಯವಾಗಿದೆ. ಜಿಲ್ಲೆಯಲ್ಲಿಯೇ ಇಂಡಿ ಇ - ಫೈಲ್‌ ತಂತ್ರಾಂಶದಲ್ಲಿ ಮೊದಲ ಸ್ಥಾನದಲ್ಲಿದ್ದಿರುವುದು ಸಂತಸದ ಸಂಗತಿ. ಇದಕ್ಕೆ ಮೇಲಾಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿ ಸತತ ಪ್ರಯತ್ನ ಕಾರಣವಾಗಿದೆ.

ಬಿ.ಎಸ್‌.ಕಡಕಬಾವಿ, ತಹಸೀಲ್ದಾರ,ಇಂಡಿ.