ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಭೌಗೋಳಿಕವಾಗಿ ವಿಸ್ತಾರವಾಗಿರುವ ಇಂಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕೆಂಬ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆಯುತ್ತಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಇಂಡಿಗೆ ಜನಸಂಖ್ಯೆಗೆ ಅನುಗುಣವಾಗಿ ಇಲ್ಲವೆ ಅಪರಾಧ ಚಟುವಟಿಕೆ ಮಟ್ಟಹಾಕಲು ಹಾಗೂ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಇಂಡಿ ಪಟ್ಟಣ ಸೇರಿ ತಾಲೂಕಿನಲ್ಲಿ ಇನ್ನೂ 2-3 ಹೊಸ ಪೊಲೀಸ್ ಠಾಣೆ ನಿರ್ಮಾಣದ ಅವಶ್ಯಕತೆ ಇದ್ದು, ಸಧ್ಯ ಎರಡು ದಶಕಗಳ ಹಿಂದಿನ ಲೆಕ್ಕದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಇದೆ. ಆದರೆ, ಈಗ ಜನಸಂಖ್ಯೆ ದ್ವಿಗುಣವಾಗಿದ್ದು, ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ.
ಅಪರಾಧ ನಿಯಂತ್ರಣಕ್ಕೆ ಬೇಕಿದೆ ಠಾಣೆಗಳ ಬಲ:ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳನ್ನು ವಿಭಜಿಸುವ ಭೀಮಾನದಿಯ ಆಚೆಗೆ ಮಹಾರಾಷ್ಟ್ರ, ಈಚೆಗೆ ಕರ್ನಾಟಕ ಸರಹದ್ದು ಇದೆ. ಮಹಾರಾಷ್ಟ್ರ ಭಾಗದಲ್ಲಿ ಅಪರಾಧ ಮಾಡಿ ಕರ್ನಾಟಕ ಸರಹದ್ದಿಗೆ ಸೇರುವುದು, ಕರ್ನಾಟಕದಲ್ಲಿ ಅಪರಾಧ ಎಸಗಿ ಭಾಗಿಯಾಗಿ ಮಹಾರಾಷ್ಟ್ರ ಸರಹದ್ದು ಸೇರುವ ಅಪರಾಧಿಕ ಚಟುವಟಿಕೆ ಹೆಚ್ಚುತ್ತಿವೆ. ಇವುಗಳನ್ನು ಹತ್ತಿಕ್ಕಲು ಹೊಸದಾಗಿ ಮತ್ತಷ್ಟು ಪೊಲೀಸ್ ಠಾಣೆಗಳನ್ನು ತೆರೆದು ಹೆಚ್ಚಿನ ಸಿಬ್ಬಂದಿ ಒದಗಿಸುವುದರ ಜೊತೆಗೆ, ಎಎಸ್ಪಿ ಹುದ್ದೆಯನ್ನು ಸೃಜಿಸಿ ಸರ್ಕಾರ ಆದೇಶಿಸಿದರೆ, ಗಡಿ ಭಾಗದಲ್ಲಿ ನಡೆಯುವ ಅಪರಾಧಿಕ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದು ಈ ಭಾಗದ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಟ್ರಾಫಿಕ್ ಪೊಲೀಸ್ ಠಾಣೆ:ಇಂಡಿ ಪಟ್ಟಣ ಜಿಲ್ಲಾ ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದುವುದರ ಜೊತೆಗೆ ಸಂಚಾರಿ (ಟ್ರಾಫಿಕ್) ಸಮಸ್ಯೆಯೂ ಉಂಟಾಗುತ್ತಿದೆ. ಪಟ್ಟಣ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿದ್ದು, ವಾಹನಗಳ ದಟ್ಟಣೆಯೂ ಹೆಚ್ಚಿದೆ. ಸುಗಮ ಸಂಚಾರ ವ್ಯವಸ್ಥೆ ಮಾಡಲು ಇಂಡಿಗೆ ಟ್ರಾಫಿಕ್ ಪೊಲೀಸ್ ಠಾಣೆ ಅವಶ್ಯಕತೆ ಬಹಳಷ್ಟಿದೆ.
ಇಂಡಿ ನಗರ ಠಾಣೆಗೆ ಹೆಚ್ಚು ಗ್ರಾಮ ಸೇರ್ಪಡೆ:ಇಂಡಿ ಪಟ್ಟಣದಲ್ಲಿರುವ ಪಿಐ ಶಹರ ಪೊಲೀಸ್ ಠಾಣೆಯ ಕರ್ತವ್ಯ ವ್ಯಾಪ್ತಿಯನ್ನು ಕೇವಲ 5 ಕಿಮೀ ವರೆಗೆ ಸಿಮೀತಗೊಳಿಸಿದ್ದರಿಂದ, ಗ್ರಾಮೀಣ ಪೊಲೀಸ್ ಠಾಣೆಗೆ ಹೆಚ್ಚು ಗ್ರಾಮಗಳು ಒಳಗೊಂಡಿವೆ. ಗ್ರಾಮೀಣ ಪೊಲೀಸ್ ಠಾಣೆಗೆ ಸೇರ್ಪಡೆಯಾದ ಕೆಲವು ಗ್ರಾಮಗಳು ಶಹರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡಿಸಿದರೆ ಅಪರಾಧ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸುಲಭವಾಗಲಿದೆ. ಇಂಡಿ ಶಹರ ಪಿಐ ಠಾಣೆ ವ್ಯಾಪ್ತಿ ಸುಮಾರು 10 ಕಿಮೀ ವ್ಯಾಪ್ತಿ ವಿಸ್ತರಿಸಿದರೆ ಅನುಕೂಲವಾಗುತ್ತದೆ ಎಂಬುದು ಆ ಗ್ರಾಮಗಳ ಜನರ ಅಭಿಪ್ರಾಯವಾಗಿದೆ.
ತಾಂಬಾಗೆ ಬೇಕಿದೆ ಹೊಸ ಪೊಲೀಸ್ ಠಾಣೆ:ತಾಲೂಕು ಕೇಂದ್ರದ ವ್ಯಾಪ್ತಿಯಷ್ಟು ವಿಸ್ತಾರ ಹೊಂದಿರುವ ಇಂಡಿ ತಾಲೂಕಿನ ವ್ಯಾಪ್ತಿಗೆ ಒಳಪಡುವ ತಾಂಬಾ ಗ್ರಾಮಕ್ಕೆ ಹೊಸ ಪೊಲೀಸ್ ಠಾಣೆ ಮಂಜೂರಿ ಮಾಡುವುದು ಅಗತ್ಯವಾಗಿದೆ. ತಾಂಬಾ ಗ್ರಾಮದಿಂದಲೇ ವಿಜಯಪುರ, ಸಿಂದಗಿ, ಇಂಡಿ ಹಾಗೂ ಆಲಮೇಲ ಪಟ್ಟಣಗಳಿಗೆ ಹೋಗಲು ರಸ್ತೆಗಳಿವೆ. ಜನಸಂಖ್ಯೆಯಲ್ಲಿಯೂ ವಿಸ್ತಾರ ಹೊಂದಿರುವ ತಾಂಬಾ ಗ್ರಾಮಕ್ಕೆ ಹೊಸ ಪೊಲೀಸ್ ಠಾಣೆ ಅಗತ್ಯವಾಗಿದೆ.
ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಸಿಂದಗಿ-ಆಲಮೇಲ ಪ್ರದೇಶಕ್ಕೆ ಹೋಗುವ ಭಾಗದಲ್ಲಿ ಬರುವ ನಾದ ಕೆಡಿ ಗ್ರಾಮ ಹೋಬಳಿ ಮಟ್ಟದಲ್ಲಿ ಇದ್ದು, ನಾದ ಕೆಡಿ ಗ್ರಾಮ ಸುಮಾರು 10 ರಿಂದ 15 ಗ್ರಾಮಗಳಿಗೆ ಕೇಂದ್ರ ಸ್ಥಳವಾಗಿದೆ. ನಾದ ಕೆಡಿ ಗ್ರಾಮದಲ್ಲಿ ಹೊರ ಪೊಲೀಸ್ ಠಾಣೆ ಮಂಜೂರು ಮಾಡಿದರೆ,ಆ ಭಾಗದ ಸುಮಾರು 10 ರಿಂದ 15 ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುವುದಲ್ಲದೆ, ಅಪರಾಧಿಕ, ಅಕ್ರಮ ಚಟುವಟಿಕೆ ಮಟ್ಟಹಾಕಲು ಪೊಲೀಸ್ ಇಲಾಖೆಗೆ ಸಹಾಯ ಆಗುತ್ತದೆ.ಇಂಡಿ ಪಟ್ಟಣದಿಂದ ಸುಮಾರು 6 ಕಿ.ಮೀ. ಅಂತರದಲ್ಲಿ ರೈಲು ನಿಲ್ದಾಣ ಇದ್ದು, ದಿನದ 24 ಗಂಟೆಗಳವರೆಗೆ ರೈಲು ಸಂಚಾರ ಇರುತ್ತದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇಂಡಿ ರೈಲು ನಿಲ್ದಾಣದಲ್ಲಿ ಹೊರಪೊಲೀಸ್ ಠಾಣೆ ನಿರ್ಮಿಸಿ 3-4 ಜನ ಪೊಲೀಸ್ ಸಿಬ್ಬಂದಿ ನೇಮಕ ಮಾಡಿದರೆ ಅನುಕೂಲವಾಗಲಿದೆ.
ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹುಡ್ಕೊ, ತಾಲೂಕು ಕ್ರೀಡಾಂಗಣ, ಹೆಲಿಪ್ಯಾಡ್, ಆದರ್ಶ ವಿದ್ಯಾಲಯ, ಸರ್ಕಾರಿ ಪಿಯು, ಪದವಿ ಕಾಲೇಜುಗಳು ಇದ್ದು, ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಪ್ರತಿನಿತ್ಯ ಆದರ್ಶ ವಿದ್ಯಾಲಯದ ಬಳಿ ಪೊಲೀಸ್ ಚೌಕಿ ನಿರ್ಮಿಸಿ, ಪ್ರತಿದಿನ ನಾಲ್ಕು ಜನ ಪೊಲೀಸ್ ಸಿಬ್ಬಂದಿ ನೇಮಕ ಮಾಡಿದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಭದ್ರತೆ ಒದಗಿಸಿದಂತಾಗುತ್ತದೆ.ಇಂಡಿಯಲ್ಲಿ ಪೊಲೀಸ್ ಉಪ ವಿಭಾಗ, ಕಂದಾಯ ಉಪ ವಿಭಾಗ, ಹೆಸ್ಕಾಂ ಉಪ ವಿಭಾಗ, ಕೃಷಿ ಡಿಡಿ-2 ಕಚೇರಿ, ರಾಜ್ಯ ಮಟ್ಟದ ಲಿಂಬೆ ಅಭಿವೃದ್ಧಿ ನಿಗಮ ಸೇರಿದಂತೆ ಜಿಲ್ಲಾ ಕೇಂದ್ರದ ಅನೇಕ ಕಚೇರಿಗಳು ಇದ್ದು, ಈ ಭಾಗದ ಅಪರಾಧಿಕ ಚಟುವಟಿಕೆ ಕಡಿಮೆ ಮಾಡಲು ಹಾಗೂ ಸಾರ್ವಜನಿಕರ ಭದ್ರತೆಯ ದೃಷ್ಟಿಯಿಂದ ಎಎಸ್ಪಿ ಹುದ್ದೆ ಮಂಜೂರು ಮಾಡುವುದರ ಜೊತೆಗೆ ಟ್ರಾಫಿಕ್, ಹೊರ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡುವುದು ಅಗತ್ಯವಾಗಿದೆ ಎಂದು ತಾಲೂಕಿನ ಪ್ರಜ್ಞಾವಂತ ನಾಗರಿಕರ ಮನವಿಯಾಗಿದೆ.
"ಇಂಡಿ ಜಿಲ್ಲಾ ಕೇಂದ್ರವಾಗಲು ಹೊರಟಿದ್ದು, ಜನಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಪಟ್ಟಣವೂ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ ಇಂಡಿ ತಾಲೂಕಿನಲ್ಲಿ ಇನ್ನಷ್ಟು ಹೊಸ ಪೊಲೀಸ್ ಠಾಣೆಗಳ ನಿರ್ಮಾಣ ಹಾಗೂ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದೆ ".- ಜಗದೀಶ ಕ್ಷತ್ರಿ ಮುಖಂಡ ಇಂಡಿ "ಇಂಡಿ ಪೊಲೀಸ್ ಉಪ ವಿಭಾಗಕ್ಕೆ ನಾನು ಹೊಸದಾಗಿ ಬಂದಿದ್ದು, ಹೊರಪೊಲೀಸ್ ಠಾಣೆಗಳು ಯಾವ ಪ್ರದೇಶಕ್ಕೆ ಬೇಕು ಎಂಬುದು ಪರಿಶೀಲಿಸಿ, ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ".
-ಜಗದೀಶ ಡಿವೈಎಸ್ಪಿ ಇಂಡಿ ಉಪ ವಿಭಾಗ "ಇಂಡಿ ಪೊಲೀಸ್ ಉಪ ವಿಭಾಗಕ್ಕೆ ನಾನು ಹೊಸದಾಗಿ ಬಂದಿದ್ದು, ಹೊರಪೊಲೀಸ್ ಠಾಣೆಗಳು ಯಾವ ಪ್ರದೇಶಕ್ಕೆ ಬೇಕು ಎಂಬುದು ಪರಿಶೀಲಿಸಿ, ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ".-ಜಗದೀಶ ಡಿವೈಎಸ್ಪಿ ಇಂಡಿ ಉಪ ವಿಭಾಗ