ಸಾರಾಂಶ
ಹವಾಮಾನ ವೈಪರೀತ್ಯ,ಕೃತಕ ಬುದ್ಧಿಮತ್ತೆ, ಆರೋಗ್ಯ ಹೀಗೆ ನಮ್ಮೆದೆರು ಸಾಕಷ್ಟು ಸವಾಲುಗಳಿವೆ
ಧಾರವಾಡ: ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನೆ ದ್ವಿಗುಣಗೊಂಡಿದ್ದು, ಅದರಲ್ಲೂ ವೈಜ್ಞಾನಿಕ ಪ್ರಕಟಣೆಗಳಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಯುಕೆ ಹಾಗೂ ಜಪಾನ್‌ಗಿಂತಲೂ ಮುಂದಿದೆ ಎಂದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ. ಅಭಯ ಕರಂಡೀಕರ ಹೆಮ್ಮೆ ವ್ಯಕ್ತಪಡಿಸಿದರು.
ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಭಾಂಗಣದಲ್ಲಿ ಶನಿವಾರ ನಡೆದ ಧಾರವಾಡ ಐಐಟಿ ಆರನೇ ಘಟಿಕೋತ್ಸವದ ಭಾಷಣ ಮಾಡಿದ ಅವರು, 2012ರಲ್ಲಿ 78 ಪ್ರಕಟಣೆಗಳಿಂದ 2022ರಲ್ಲಿ ಎರಡು ಲಕ್ಷಕ್ಕೆ ಹೆಚ್ಚಾಗಿದೆ. ಇದು ಅಮೇರಿಕಾ ಮತ್ತು ಚೀನಾ ನಂತರ ಭಾರತ ಮಾತ್ರ ಈ ಸ್ಥಾನದಲ್ಲಿದ್ದು, ಹೆಮ್ಮೆಯ ಸಂಗತಿ ಎಂದರು. ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ ಶ್ರೇಯಾಂಕ 2024ರಲ್ಲಿ 39ಕ್ಕೆ ಏರಿದೆ. ಇಂತಹ ಈ ಮೈಲುಗಲ್ಲುಗಳು ಬೆಳೆಯುತ್ತಿರುವ ಭಾರತದ ಸಾಮರ್ಥ್ಯ ಮತ್ತು ಮಹತ್ವಾಕಾಂಕ್ಷೆಯ ಪ್ರತಿಬಿಂಬಿಸುತ್ತದೆ. ವಿಶ್ವದ ಮೂರನೇಯ ಅತಿದೊಡ್ಡ ಸ್ಥಾರ್ಟ್ಅಪ್ ಪರಿಸರ ವ್ಯವಸ್ಥೆ ಭಾರತದಲ್ಲಿ ನಿರ್ಮಾಣವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವು ಜಿಡಿಯಲ್ಲಿ ಶೇ.0.54ರಷ್ಟಿದೆ. ಅಂದರೆ ಜಾಗತಿಕ ಸರಾಸರಿ ಶೇ.1.79ಕ್ಕಿಂತ ಕಡಿಮೆ ಎಂದರು. ಧಾರವಾಡ ಐಐಟಿಯಿಂದ ಪದವಿ ಪಡೆದ ತಾವು, ಪ್ರಪಂಚದಾದ್ಯಂತ ಛಾಪು ಮೂಡಿಸಿರುವ ಹಳೆಯ ವಿದ್ಯಾರ್ಥಿಗಳ ಪರಂಪರೆ ಭಾಗವಾಗುತ್ತೀರಿ. ಬಹುದೊಡ್ಡ ಕನಸು ಕಂಡು, ಸವಾಲು ಸ್ವೀಕರಿಸಿ, ಉತ್ತಮ ಭವಿಷ್ಯ ರೂಢಿಸಿಕೊಳ್ಳಬೇಕು. ಆತ್ಮಶಕ್ತಿ ಮೇಲೆ ವಿಶ್ವಾಸವಿಟ್ಟು, ವಿಕಸಿತ ಭಾರತ್-2047ಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದರು.ಗೋವಾ ಐಐಟಿ ನಿರ್ದೇಶಕ ಪ್ರೊ. ಧೀರೇಂದ್ರ ಕಟ್ಟಿ ಮಾತನಾಡಿ, ಹವಾಮಾನ ವೈಪರೀತ್ಯ,ಕೃತಕ ಬುದ್ಧಿಮತ್ತೆ, ಆರೋಗ್ಯ ಹೀಗೆ ನಮ್ಮೆದೆರು ಸಾಕಷ್ಟು ಸವಾಲುಗಳಿವೆ. ಇವುಗಳ ನಡುವೆಯೂ ಜ್ಞಾನ ವೃದ್ಧಿಸಿಕೊಂಡು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಘಟಿಕೋತ್ಸವದಲ್ಲಿ 20 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, 13 ಎಂಎಸ್ಸಿ, 138 ಬಿಟೆಕ್ ಮತ್ತು 30 ಎಂಟೆಕ್ ಸೇರಿ 227 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಎಲೆಕ್ಟ್ರಿಕಲ್ ಎಂಜನಿಯರಿಂಗ್ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ಪೊಮಾಜಿ ರಿಷಭ್ ಶರದ್ ರಾಷ್ಟ್ರಪತಿ ಚಿನ್ನದ ಪದಕ, ಭೌತಶಾಸ್ತ್ರ ವಿಭಾಗದ ಕೆ. ಅಭಿರಾಮ್ ನಿರ್ದೇಶಕರ ಚಿನ್ನದ ಪದಕ, ಹಾಗೆಯೇ ವಿವಿಧ ವಿಷಯಗಳಲ್ಲಿ ಏಳು ವಿದ್ಯಾರ್ಥಿಗಳು ಬೆಳ್ಳಿಯ ಪದಕ ಪಡೆದರು.ಧಾರವಾಡ ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ವಾರ್ಷಿಕ ವರದಿ ವಾಚಿಸಿದರು. ದೆಹಲಿ ಐಐಟಿ ಪ್ರಾಧ್ಯಾಪಕ ಎಸ್.ಎಸ್. ಮೂರ್ತಿ, ರಿಜಿಸ್ಟಾರ್ ಡಾ. ಕಲ್ಯಾಣಕುಮಾರ, ಪ್ರೊ. ಅಮರನಾಥ ಹೆಗಡೆ, ಪ್ರೊ. ಕೆ.ವಿ.ಜಯಕುಮಾರ, ಪ್ರೊ. ಎನ್.ಎಸ್.ಪುನೇಕರ, ಪ್ರೊ. ಸಿ.ರವಿಕುಮಾರ ಇದ್ದರು.
ಧಾರವಾಡ ಐಐಟಿ ಪರಿಸರ ಪ್ರಜ್ಞೆ, ವಿಶ್ವಮಾನವ ಮನೋಭಾವದ ಜತೆಗೆ ಅಂತರಶಿಸ್ತಿಯ ಕಲಿಕೆ ಬದ್ಧತೆಯ ದೃಷ್ಟಿಕೋನದೊಂದಿಗೆ ನಾವೀನ್ಯತೆ ಮತ್ತು ಅಂತರ್ಗತ ಪ್ರಗತಿಯ ಸಂಕೇತವಾಗಿ ನಿಂತಿದೆ. ಭಾರತ ಹೆಚ್ಚು ಯುವ ಶಕ್ತಿ ಹೊಂದಿದೆ.ಈ ಯುವ ಶಕ್ತಿ ಭಾರತ ದೇಶವನ್ನು ಜಾಗತಿಕ, ತಾಂತ್ರಿಕ ಹಾಗೂ ಆರ್ಥಿಕ ಶಕ್ತಿಯಾಗಿ ಪರಿವರ್ತಿಸುವ ಕೀಲಿಕೈ ಇದ್ದಂತೆ. ಹೀಗಾಗಿ ಕಲಿಕೆ ಫಲ ಸಮಾಜಕ್ಕೆ ಮರಳಿಸಬೇಕು ಎಂದು ಭಾರತ ಸರ್ಕಾರದ ವಿಜ್ಞಾನ-ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ. ಅಭಯ ಕರಂಡೀಕರ ತಿಳಿಸಿದ್ದಾರೆ.