ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಒಕ್ಕೂಟದಿಂದ ಪ್ರತಿಭಟನೆ ಮುಂದುವರಿಸಿದ್ದು, 12ರಂದು ದೆಹಲಿಯಲ್ಲಿ ಮತ್ತೆ ಹೋರಾಟ ನಡೆಯಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
- ಜ್ಞಾನೇಶಕುಮಾರ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ
- ಅನ್ಯ ರಾಜ್ಯದವರಿಂದ ಕಾಂಗ್ರೆಸ್ಸಿಗರ ಸ್ಟಿಂಗ್ ಆಪರೇಷನ್ ಅಂತೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಒಕ್ಕೂಟದಿಂದ ಪ್ರತಿಭಟನೆ ಮುಂದುವರಿಸಿದ್ದು, 12ರಂದು ದೆಹಲಿಯಲ್ಲಿ ಮತ್ತೆ ಹೋರಾಟ ನಡೆಯಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಭಾನುವಾರ ನವರಾತ್ರಿ ಅಂಗವಾಗಿ ದುಗ್ಗಮ್ಮ ದೇವಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಕಳೆದೊಂದು ವಾರದಲ್ಲೇ 300ಕ್ಕೂ ಹೆಚ್ಚು ಇಂಡಿ ಮೈತ್ರಿಕೂಟದ ಸಂಸದರು ಪ್ರತಿಭಟಿಸಿದ್ದು, ಜ್ಞಾನೇಶಕುಮಾರ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಯಲಿದೆ ಎಂದರು.
ಇಂಡಿಯಾ ಒಕ್ಕೂಟದ ಹೋರಾಟ ತಡೆಯಲು ಮೂರು ಹಂತದಲ್ಲಿ ಬ್ಯಾರಿಕೇಡ್ ಹಾಕಿದ್ದರು. ಸಂಸದರ ಸಂಖ್ಯಾಬಲ ಕಡಿಮೆಗೊಳಿಸಲು ನಮ್ಮನ್ನು ಬಂಧಿಸಲು ಮುಂದಾಗಿದ್ದರು. ಜಂತರ್ ಮಂಥರ್‌ನಲ್ಲಿ ಪ್ರತಿಭಟನೆಗೂ ಅವಕಾಶ ನೀಡಲಿಲ್ಲ. ಇಂಡಿಯಾ ಒಕ್ಕೂಟದ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರನ್ನು ಬಂಧಿಸಲಾಯಿತು. ಪ್ರಿಯಾಂಕಾ ಗಾಂಧಿ ರಸ್ತೆ ಮೇಲೆಯೇ ಮಲಗಿ ಹೋರಾಟ ಮುಂದುವರಿಸಿದರು. ಸಿಇಸಿ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಹಂತ ಹಂತವಾಗಿ ಇಂಡಿಯಾ ಒಕ್ಕೂಟದಿಂದ ಹೋರಾಟಗಳು ನಡೆಯುತ್ತಿವೆ. ಒಕ್ಕೂಟದ ಸಭೆಯಲ್ಲೂ ಜ್ಞಾನೇಶಕುಮಾರ ರಾಜೀನಾಮೆಗೆ ಹೋರಾಟ ತೀವ್ರಗೊಳಿಸಲು ಚರ್ಚಿಸಲಾಗಿದೆ ಎಂದು ಹೇಳಿದರು.ಇಡೀ ದೆಹಲಿಯನ್ನು ಸಿಜೆಪಿ ಹೋರಾಟದ ಹಿನ್ನೆಲೆ ಕೇಂದ್ರ ಸರ್ಕಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ದೆಹಲಿಗೆ ಹೋಗುವಂತಹವರ ಮಾಹಿತಿ ಪಡೆಯಲಾಗುತ್ತಿದೆ. ಎಲ್ಲ ರೀತಿಯಲ್ಲೂ ಹೋರಾಟವನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ತಳಹದಿಯನ್ನೇ ನಾಶಪಡಿಸುವ ಕೆಲಸ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳೂ ಹೋರಾಟಕ್ಕೆ ಬಂದಿದ್ದರು ಎಂದು ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆ ಸರಿಯಾಗಿಲ್ಲ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ 5 ತಿಂಗಳ ಮುಂಚೆ ಎಸ್ಐಆರ್ ಪ್ರಕ್ರಿಯೆ ಕೈಗೊಂಡರು. ಈವರೆಗೆ ದೇಶಾದ್ಯಂತ ಸುಮಾರು 13 ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಕೇವಲ ಚುನಾವಣಾ ಆಯೋಗದ ಮುಖ್ಯಸ್ಥರು ಮಾತ್ರ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಸುಪ್ರೀಂ ಕೋರ್ಟ್ ಸಹ ಇದಕ್ಕೆ ಆಕ್ಷೇಪಣೆ ಸಲ್ಲಿಸಿದೆ ಎಂದು ವಿವರಿಸಿದರು.ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಏನಾದರೂ ತಿದ್ದುಪಡಿ ಮಾಡಬೇಕೆಂದರೆ ಅದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆಗಬೇಕು. ಅದೂ ನಡೆಯದೇ ಕೇಂದ್ರ ಚುನಾವಣಾ ಆಯೋಗವು ನಿರ್ಧಾರ ಕೈಗೊಳ್ಳುತ್ತಿದೆ. ದೇಶಧ ಚುನಾವಣಾ ಪ್ರಕ್ರಿಯೆಯಲ್ಲೂ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ ಎಂದು ಡಾ.ಪ್ರಭಾ ಅಭಿಪ್ರಾಯಪಟ್ಟರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಸಮರ್ಥ ಎಂ.ಶಾಮನೂರು ಇತರರು ಇದ್ದರು.- - -
(ಬಾಕ್ಸ್)* ಅನ್ಯ ರಾಜ್ಯದವರಿಂದ ಕಾಂಗ್ರೆಸ್ಸಿಗರ ಸ್ಟಿಂಗ್ ಆಪರೇಷನ್ ಅಂತೆ- - - ದಾವಣಗೆರೆ: ಸಚಿವರು, ಶಾಸಕರ ಸ್ಟಿಂಗ್ ಆಪರೇಷನ್ ನಡೆಯುತ್ತಿದೆಯೆಂದು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂಪುಟ ಸಭೆಯಲ್ಲಿ ಹೇಳಿದ್ದು, ಈಗ ಏನೂ ಹೇಳುವುದಕ್ಕೆ ಆಗುವುದಿಲ್ಲ. ಎಲ್ಲ ಕಡೆಗೂ ಸ್ಟಿಂಗ್ ಆಪರೇಷನ್ ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲೇ ಸ್ಟಿಂಗ್ ಆಪರೇಷನ್ ಬಗ್ಗೆ ಎಲ್ಲಾ ಸಚಿವರು, ಶಾಸಕರಿಗೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಬೇರೆ ರಾಜ್ಯದಿಂದ ಬಂದು, ನಮ್ಮ ಕಾಂಗ್ರೆಸ್ ಶಾಸಕರು, ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರಂತೆ ಎಂದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರನ್ನು ಕೈ ಬಿಟ್ಟಿದ್ದನ್ನು ಖಂಡಿಸಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ದೇಶವ್ಯಾಪಿ ಹೋರಾಟ ನಡೆಯುತ್ತಿದೆ. ದೆಹಲಿಯಲ್ಲಿ ಜೆನ್ ಜಿಗಳು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಅವರು ದೂರಿದರು.- - - (ಫೋಟೋ: ಎಸ್.ಎಸ್. ಮಲ್ಲಿಕಾರ್ಜುನ)
- - -(ಫೋಟೋ: ಡಾ.ಪ್ರಭಾ ಮಲ್ಲಿಕಾರ್ಜುನ)