ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪಾಕ್ ಬೆಂಬಲಿತ ಉಗ್ರಗಾಮಿಗಳಿಂದ ಪಹಾಲ್ಗಮ್ ನಲ್ಲಿ ಉಂಟಾಗಿರುವ ಧರ್ಮ ಆಧಾರಿತ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿರುವ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘ, ಪಾಕ್ ಅಕ್ರಮಿತ ಕಾಶ್ಮೀರವನ್ನು ಭಾರತ ಇದೇ ಸಂದರ್ಭ ಮರುವಶಕ್ಕೆ ಪಡೆಯಬೇಕು ಎಂದು ಪ್ರಧಾನಿ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.ಸೋಮವಾರ ಟಿ. ಶೆಟ್ಟಿಗೇರಿಯಲ್ಲಿ ನಡೆದ ಸಂಘದ ತುರ್ತು ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅವರು ಪಾಕಿಸ್ತಾನ ಹಿಂದಿನಿಂದಲೇ ಭಾರತ ವಿರೋಧಿ ಧೋರಣೆಯನ್ನು ಅನುಸರಿಸುತ್ತಾ ಬಂದಿದೆ. ಈ ಹಿಂದೆ ಪುಲ್ವಾಮಾ ಪಹಾಲ್ಗಾವ್ ಸೇರಿದಂತೆ ಹಲವಾರು ಹತ್ಯಾಕಾಂಡವನ್ನು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಮಾಡಿದ್ದಾರೆ. ಉಗ್ರಗಾಮಿಗಳಿಗೆ ಪಾಕಿಸ್ತಾನ ನಿರಂತರವಾಗಿ ಪೋಷಣೆ ಹಾಗೂ ಬೆಂಬಲವನ್ನು ನೀಡುತ್ತಿದ್ದು ಇದರಿಂದ ಭಾರತ ಮಾತ್ರವಲ್ಲದೇ ವಿಶ್ವದ ಶಾಂತಿಗೆ ದೊಡ್ಡ ಗಂಡಾಂತರವಾಗಿದೆ. ಆದ್ದರಿಂದ ಪಾಕಿಸ್ತಾನದ ವಿರುದ್ಧ ಈಗ ಕೈಗೊಂಡಿರುವ ಸಿಂಧೂರ ಆಪರೇಷನ್ ಸ್ವಾಗತವಾಗಿದೆ ಇದನ್ನು ಮತ್ತಷ್ಟು ಮುಂದುವರಿಸಿ ಶಾಶ್ವತವಾಗಿ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳನ್ನು ದಮನ ಮಾಡಬೇಕೆಂದು ಒತ್ತಾಯಿಸಿದರು.
ಶಾಂತಿ ಮಾತುಕತೆಗೆ ಮುಂದಾಗಬಾರದು:ಸಂಘದ ಸಹಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ ಅವರು ಮಾತನಾಡಿ, ಪಾಕಿಸ್ತಾನದ ಯಾವುದೇ ಶಾಂತಿ ಮಾತುಕತೆಗೆ ಭಾರತ ಮುಂದಾಗಬಾರದು. ಪಾಕಿಸ್ತಾನದಲ್ಲಿರುವ ಎಲ್ಲಾ ಉಗ್ರಗಾಮಿಗಳ ಅಡಗುತಾಣವನ್ನು ಭಾರತ ಸದೆಬಡೆಯಬೇಕು. ಹಿಂದಿನಿಂದಲೂ ಭಾರತಕ್ಕೆ ಪಾಕಿಸ್ತಾನ ಉಗ್ರಗಾಮಿಗಳನ್ನು ನುಸುಳಿಸಿ ಭಾರತದಲ್ಲಿ ಅಶಾಂತಿ ಹಾಗೂ ಪ್ರಗತಿಯನ್ನು ಕುಂಠಿತ ಮಾಡಲು ಪ್ರಯತ್ನಿಸುತ್ತಿದೆ. ಅವಶ್ಯವಾದರೆ ದೇಶದಲ್ಲಿ 30 ರಿಂದ 40 ಲಕ್ಷ ಮಾಜಿ ಸೈನಿಕರಿದ್ದು ಅವರನ್ನು ಸಹ ಯುದ್ಧಕ್ಕೆ ಬುಲಾವ್ ಮಾಡಿದರೆ, ತಾವು ಯುದ್ಧಕ್ಕೆ ತೆರಳಲು ಸಿದ್ಧ ಇರುವುದಾಗಿ ಅವರು ತಿಳಿಸಿದರು.
ಸಂಘದ ನಿರ್ದೇಶಕ ಮೀದೇರಿರ ಸುರೇಶ್ ಅವರು ಮಾತನಾಡಿ ತಾವು ಸೇನೆಯದಲ್ಲಿ ಜಮ್ಮು ಮತ್ತು ಕಾಶ್ಮೀರ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದ್ದು, ಆಗಿನಿಂದಲೇ ಉಗ್ರಗಾಮಿಗಳ ಉಪಟಳ ನಿರಂತರವಾಗಿ ಮುಂದುವರೆದಿದೆ. ಇದೀಗ ಸಿಂದೂರ ಆಪರೇಷನ್ ಮೂಲಕ ಭಾರತ ದಿಟ್ಟ ಕ್ರಮ ಕೈಗೊಂಡಿದ್ದು ಆಕ್ರಮಿತ ಕಾಶ್ಮೀರವನ್ನು ಭಾರತ ಮರುವಶಕ್ಕೆ ಪಡೆಯಬೇಕು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಎಲ್ಲಾ ಉಗ್ರಗಾಮಿಗಳ ಅಡಗು ತಾಣಗಳನ್ನು, ತರಬೇತಿ ಕೇಂದ್ರಗಳನ್ನು ಸಂಪೂರ್ಣ ನಾಶ ಮಾಡಬೇಕೆಂದು ಅವರು ಒತ್ತಾಯಿಸಿದರು.ಯುದ್ಧವನ್ನು ನಿಲ್ಲಿಸಬಾರದು:
ಸಂಘದ ಖಜಾಂಚಿ ಚೆಟ್ಟಂಗಡ ವಿಜಯ ಕಾರ್ಯಪ್ಪ ಅವರು ಮಾತನಾಡಿ ಭಾರತ ಯಾವುದೇ ಕಾರಣಕ್ಕೆ ಯುದ್ಧವನ್ನು ನಿಲ್ಲಿಸಬಾರದು. ಅಕ್ರಮಿತ ಕಾಶ್ಮೀರವನ್ನು ಭಾರತ ವಾಪಸು ಪಡೆದಿದ್ದರೆ ಅಲ್ಲಿ ಮತ್ತೆ ಪಾಕಿಸ್ತಾನದ ನೆರವಿನಿಂದ ಉಗ್ರಗಾಮಿಗಳ ತಾಣವಾಗಲಿದೆ. ಇದರಿಂದ ಭಾರತಕ್ಕೆ ಮತ್ತಷ್ಟು ಬೆದರಿಕೆಗಳು ಉಂಟಾಗಲಿದೆ. ಭಾರತ ಯಾವುದೇ ಒತ್ತಡಕ್ಕೆ ಮಣಿಯದೆ ಉಗ್ರಗಾಮಿಗಳನ್ನು ಸಂಪೂರ್ಣ ಸದೆಬಡಿಯವರಿಗೆ ಹಾಗೂ ಅದಕ್ಕೆ ಪೋಷಣೆ ನೀಡುವ ಪಾಕಿಸ್ತಾನವನ್ನು ಸಹ ತಕ್ಕ ಪಾಠ ಕಲಿಸುವವರೆಗೆ ಯುದ್ಧ ಮುಂದುವರಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭ ಪಹಾಲ್ಗಮ್ ಹತ್ಯಾಕಾಂಡದಲ್ಲಿ ಮಾಡಿದವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೈಗೊಂಡ ನಿರ್ಣಯದ ಬಗ್ಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮನ್ನೆರ ರಮೇಶ್, ಕಾರ್ಯದರ್ಶಿ ಚಂಗುಲಂಡ ಸತೀಶ್, ಸಂಘದ ನಿರ್ದೇಶಕರಾದ ಎಂ.ಎ. ಬೆಳ್ಳಿಯಪ್ಪ, ಸಿ.ಯು. ಗೋಕುಲ, ಎಂ. ಎಸ್. ಕುಶಾಲಪ್ಪ, ಸಿ.ಸಿ. ಪುಣ್ಯವತಿ, ಕೆ.ಬಿ. ಪಾರ್ವತಿ, ಸದಸ್ಯರಾದ ಎಂ.ಎ. ಸೋಮಯ್ಯ, ಸಿ.ಎಸ್. ಶಶಿ, ಡಿ.ಕೆ.ಪೂಣಚ್ಚ, ಎಂ.ಎಂ.ದೇವಯ್ಯ, ಐ. ಎ. ದೇವಯ್ಯ, ಕೆ. ಎಂ. ಕುಶಾಲಪ್ಪ ಹಾಜರಿದ್ದರು.