ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅತ್ತ್ಯುತ್ತಮ ಸಾಧನೆ

| Published : Dec 31 2023, 01:31 AM IST

ಸಾರಾಂಶ

ಚಂದ್ರಯಾನ-2ರ ಸೋಲಿನ ಹಿಂದೆಯೇ, ಚಂದ್ರಯಾನ-3 ಅಭೂತಪೂರ್ವ ಯಶಸ್ಸು ವಿಶ್ವದಲ್ಲಿ ಭಾರತವನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದಂತಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ‌‌ ಅತ್ತ್ಯುತ್ತಮ ಸಾಧನೆ ಮಾಡುತ್ತಿದ್ದು, ಬಾಹ್ಯಾಕಾಶ ಹಾಗೂ ತಂತ್ರಜ್ಞಾನದ ಪ್ರಯೋಜನ ಪ್ರತಿಯೊಬ್ಬರಿಗೂ ಲಭಿಸುತ್ತಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಟಿ.ಎಸ್. ಶಿವಪ್ರಸಾದ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ‌‌ ದೇಶ ಅತ್ತ್ಯುತ್ತಮ ಸಾಧನೆ ಮಾಡುತ್ತಿದ್ದು, ಬಾಹ್ಯಾಕಾಶ ಹಾಗೂ ತಂತ್ರಜ್ಞಾನದ ಪ್ರಯೋಜನ ಪ್ರತಿಯೊಬ್ಬರಿಗೂ ಲಭಿಸುತ್ತಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಟಿ.ಎಸ್. ಶಿವಪ್ರಸಾದ್ ಹೇಳಿದರು.

ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ವತಿಯಿಂದ ಆಯೋಜಿಸಿದ್ದ 2023- 24ನೇ ಶೈಕ್ಷಣಿಕ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ "ಚಂದ್ರಯಾನ-3 "‌ ವಿಷಯ ಕುರಿತು ಮಾತನಾಡಿದರು.

ಇಸ್ರೋ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಯಶಸ್ವಿ ಆಗಿಸುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ‌ ದಾಖಲೆ ಬರೆಯಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆ ಭಾರತಕ್ಕಿದೆ. ಇದು ಪ್ರತಿಯೊಬ್ಬ ಭಾರತೀಯರಿಗೂ ಅತ್ಯಂತ ಸಂತಸದ ಕ್ಷಣ ಆಗಿತ್ತು. 23 ಆಗಸ್ಟ್ 2023 ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದು ತಿಳಿಸಿದರು.

ಡಿವಿಎಸ್ ಸಂಸ್ಥೆಯಲ್ಲಿ ಅಧ್ಯಯನ ‌ನಡೆಸಲು‌‌‌ ಅವಕಾಶ ‌ಸಿಕ್ಕಿದ್ದು ನನ್ನ ಜೀವನದ ಪುಣ್ಯ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ‌ ಮಾಡಲು ಪ್ರೇರಣೆ ಡಿವಿಎಸ್. ಡಿಪ್ಲೊಮಾ ಶಿಕ್ಷಣದಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆಯಲು ಶಕ್ತಿ‌ ನೀಡಿದ್ದು ಡಿವಿಎಸ್‌ ಸಂಸ್ಥೆ ಎಂದರು.

ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ. ದಿನೇಶ್ , ವಿದ್ಯಾರ್ಥಿಗಳು ಸಕಾರಾತ್ಮಕ ಆಲೋಚನೆಯಿಂದ ಅಧ್ಯಯನ ನಡೆಸುವ ಜತೆಯಲ್ಲಿ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುರಿಯನ್ನು ಸಾಧಿಸಲು ಶಿಕ್ಷಣ ಹಂತದಿಂದಲೇ ಪ್ರಯತ್ನ ಆರಂಭಿಸಬೇಕು ಎಂದ ಅವರು, ಚಂದ್ರಯಾನ -3ರಲ್ಲಿ ದೇಶಿಯ ವಿದ್ಯಾಶಾಲಾ ವಿದ್ಯಾರ್ಥಿಗಳು ಭಾಗಿ ಆಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಉಪಪ್ರಾಚಾರ್ಯ ಸಿ.ಕೆ. ಶ್ರೀಧರ್ ಮಾತನಾಡಿದರು. ಸಮಿತಿ ಅಧ್ಯಕ್ಷ ಕೆ.ಎನ್‌. ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿದರು.

ಖಜಾಂಚಿ ಬಿ.ಗೋಪಿನಾಥ್, ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ ಎ.ಇ. ರಾಜಶೇಖರ್, ಎ.ಟಿ. ಪದ್ಮೇಗೌಡ, ಜಿ.ಎಸ್. ವೆಂಕಟೇಶ್, ಆರ್.ಗಾಯತ್ರಿ,‌ ಜಿ.ಆರ್. ಪ್ರಸನ್ನಕುಮಾರ್, ಎನ್.ಡಿ. ಪದ್ಮಶ್ರೀ, ಎನ್‌.ಎಸ್‌. ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

- - - -30ಎಸ್‌ಎಂಜಿಕೆಪಿ01:

ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇಸ್ರೋ ಹಿರಿಯ ವಿಜ್ಞಾನಿ ಟಿ.ಎಸ್. ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.