ಭಾರತದ 1.92 ಲಕ್ಷ ಟನ್ ಸಗಣಿ ವಿದೇಶಕ್ಕೆ ರಫ್ತು: ಡಾ.ಅಂಜನ್ ಕುಮಾರ್

| Published : May 13 2025, 11:47 PM IST

ಭಾರತದ 1.92 ಲಕ್ಷ ಟನ್ ಸಗಣಿ ವಿದೇಶಕ್ಕೆ ರಫ್ತು: ಡಾ.ಅಂಜನ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇಶದ 1 ಲಕ್ಷ 92 ಸಾವಿರ ಟನ್ ಸಗಣಿಯು ವಿದೇಶಕ್ಕೆ ರಪ್ತಾಗುತ್ತಿದೆ ಎಂದು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಅಂಜನ್ ಕುಮಾರ್ ತಿಳಿಸಿದರು.

ಕಾಳುಮೆಣಸು, ಅಡಕೆ ಬೆಳೆಗಳ ಆರೈಕೆ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಭಾರತ ದೇಶದ 1 ಲಕ್ಷ 92 ಸಾವಿರ ಟನ್ ಸಗಣಿಯು ವಿದೇಶಕ್ಕೆ ರಪ್ತಾಗುತ್ತಿದೆ ಎಂದು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಅಂಜನ್ ಕುಮಾರ್ ತಿಳಿಸಿದರು.

ಇಲ್ಲಿಯ ಸೀತೂರಿನ ವಿಎಸ್‌ಎಸ್‌ಎನ್‌ನ ಸಭಾಂಗಣದಲ್ಲಿ ಮಂಗಳವಾರ ತಾಲೂಕ ಕೃಷಿಕ ಸಮಾಜ ಹಾಗೂ ಸೀತೂರು ವಿಎಸ್‌ಎಸ್‌ಎನ್‌ ಜಂಟಿಯಾಗಿ ಏರ್ಪಡಿಸಿದ್ದ ಕಾಳು ಮೆಣಸು ಮತ್ತು ಅಡಕೆ ಬೆಳೆಗಳ ಆರೈಕೆ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

ದನದ ಸಗಣಿಯಲ್ಲಿ ಇರುವ ಸೂಕ್ಷ್ಮಾಣು ಜೀವಿಯು ಬೇರೆ ಯಾವುದೇ ಗೊಬ್ಬರದಲ್ಲಿ ಇಲ್ಲ. ಇದನ್ನು ಅರಿತ ವಿದೇಶಿಯರು ಭಾರತ ಸಗಣಿಯನ್ನು ಖರೀದಿ ಮಾಡುತ್ತಿದ್ದಾರೆ. ಪ್ರತಿಯೊಬ್ಬ ರೈತರು 3 ವರ್ಷಕ್ಕೊಮ್ಮೆ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಭೂಮಿ ಅಗತ್ಯವಿರುವ ಗೊಬ್ಬರಗಳನ್ನು ನೀಡಬೇಕು. ಯಾವುದೇ ಕೃಷಿ ಮಾಡುವಾಗ ನಕಾರಾತ್ಮಕ ಚಿಂತನೆ ಮಾಡದೆ ಶ್ರದ್ಧೆಯಿಂದ ಕೃಷಿ ಮಾಡಿದರೆ ಫಲ ಬಂದೇ ಬರುತ್ತದೆ. ಕಳೆದ ಕೆಲವು ವರ್ಷಗಳಿಂದ ಹವಾಮಾನ ವೈಪರೀತ್ಯ ಆಗಿರುವುದರಿಂದ ಅಡಕೆ ಹಾಗೂ ಇತರ ಬೆಳೆಗಳು ಕಡಿಮೆಯಾಗುತ್ತಿದೆ ಎಂದರು.

ಬೆಳೆ ಚೆನ್ನಾಗಿ ಬೇಕಾದರೆ ಮಣ್ಣಿನ ಪೋಷಣೆ ಸಹ ಅಗತ್ಯವಾಗಿದೆ. ಭತ್ತದ ಗದ್ದೆಗಳಲ್ಲಿ ಅಡಕೆ ಗಿಡ ನೆಡಲು ತೋಟಗಾರಿಕೆ ಸಂಶೋಧನಾ ಕೇಂದ್ರವು ಶಿಪಾರಸು ಮಾಡುವುದಿಲ್ಲ. ಕಳೆ ನಾಶ ಮಾಡಲು ಕಳೆ ನಾಶಕ ಸಿಂಪಡಿಸಬಾರದು. ಇದರಿಂದ ಮಣ್ಣಿನಲ್ಲಿರುವ ಲಕ್ಷಾಂತರ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ ಮಾತನಾಡಿ, ರೈತರು ಕೃಷಿ ತಜ್ಞರ ಸಲಹೆ ಪಡೆದು ಕೃಷಿ ಮಾಡಿದರೆ ಹೆಚ್ಚು ಇಳುವರಿ ಪಡೆಯಬಹುದು. ಮಣ್ಣು ಪರೀಕ್ಷೆ ಮಾಡಿಸಿ ಗೊಬ್ಬರ ನೀಡಬೇಕು ಎಂದರು.

ಸೀತೂರು ವಿ.ಎಸ್.ಎಸ್.ಎನ್.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸ್ವಾಗತಿಸಿದರು. ರೈತರೊಂದಿಗೆ ಸಂವಾದ ನಡೆಸಲಾಯಿತು.

ಕೊಪ್ಪ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆಸಕೊಡುಗೆ ಕೃಷ್ಣಮೂರ್ತಿ, ನರಸಿಂಹರಾಜಪುರ ಪಿಸಿಎಆರ್‌ಡಿ ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಸುಂದರೇಶ್, ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಬೆಮ್ಮನೆ ಮೋಹನ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಿ.ಜಿ.ಮಂಜಪ್ಪ ಗೌಡ, ಸೀತೂರು ವಿಎಸ್‌ಎಸ್‌ಎನ್‌ ನಿರ್ದೇಶಕರಾದ ಎಸ್.ಉಪೇಂದ್ರ, ವೈ.ವಿ.ಲೋಲಾಕ್ಷಿ, ನರಸಿಂಹರಾಜಪುರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಂ.ಜಿ.ರೋಹಿತ್, ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಇದ್ದರು.