ಭಾರತ ಅವಕಾಶಗಳ ಹೆಬ್ಬಾಗಿಲು: ಉಪ ರಾಷ್ಟ್ರಪತಿ ಜಗದೀಪ್ ಧನಕರ್

| Published : Oct 26 2024, 12:46 AM IST

ಸಾರಾಂಶ

ಕಳೆದೊಂದು ದಶಕದಿಂದ ದೇಶದ ಆರ್ಥಿಕತೆ ಬೆಳವಣಿಗೆಯತ್ತ ಮುನ್ನಡೆದಿದೆ. ಈ ಮೊದಲು ಆರ್ಥಿಕ ಬೆಳವಣಿಗೆ ಸಾಧಿಸುವ ಬಗ್ಗೆ ಜನರಿಗೆ ನಿರೀಕ್ಷೆಯೇ ಇರಲಿಲ್ಲ. ಈಗ ಆ ಕನಸು ನನಸಾಗುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ. ಭೂಮಿ, ವಾಯು, ನೌಕೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧನೆಯ ಮೈಲಿಗಲ್ಲುಗಳನ್ನು ನಿರ್ಮಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತ ಅವಕಾಶಗಳ ಹೆಬ್ಬಾಗಿಲು. ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಯುವಜನರ ಮೇಲಿದೆ. ವಿಕಸಿತ ಭಾರತಕ್ಕೆ ಕೊಡುಗೆ ನೀಡುವುದಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.

ನಾಗಮಂಗಲ ತಾಲೂಕು ಬಿಜಿಎಸ್ ನಗರದಲ್ಲಿರುವ ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದೊಂದು ದಶಕದಿಂದ ದೇಶದ ಆರ್ಥಿಕತೆ ಬೆಳವಣಿಗೆಯತ್ತ ಮುನ್ನಡೆದಿದೆ. ಈ ಮೊದಲು ಆರ್ಥಿಕ ಬೆಳವಣಿಗೆ ಸಾಧಿಸುವ ಬಗ್ಗೆ ಜನರಿಗೆ ನಿರೀಕ್ಷೆಯೇ ಇರಲಿಲ್ಲ. ಈಗ ಆ ಕನಸು ನನಸಾಗುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ. ಭೂಮಿ, ವಾಯು, ನೌಕೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧನೆಯ ಮೈಲಿಗಲ್ಲುಗಳನ್ನು ನಿರ್ಮಿಸಿದೆ ಎಂದರು.

ಹಿಂದೆ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಈಗ ಅದಕ್ಕೆಲ್ಲಾ ಕಡಿವಾಣ ಹಾಕಿದೆ. ಯುವಜನರು, ವಿದ್ಯಾರ್ಥಿಗಳ ಆಸೆ-ಕನಸುಗಳನ್ನು ನನಸು ಮಾಡಿಕೊಳ್ಳಲು ಉತ್ತಮ ಸದಾವಕಾಶ ಒದಗಿಸಲಾಗಿದೆ. ಈಗ ಅವಕಾಶಗಳ ವ್ಯಾಪ್ತಿಯನ್ನು ವಿಸ್ತಾರಗೊಳಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಮಹತ್ತರವಾದ ಕೊಡುಗೆ ನೀಡಲು ಎಲ್ಲರೂ ಸಂಕಲ್ಪ ಮಾಡುವಂತೆ ಕಿವಿಮಾತು ಹೇಳಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿ ಹರಡಲಾಗುತ್ತಿದೆ. ಇದು ದೇಶಕ್ಕೆ ಆತಂಕ ಮಾತ್ರವಲ್ಲದೆ ಅಪಾಯಕಾರಿಯೂ ಆಗಿದೆ. ಇದಕ್ಕೆ ವಿದ್ಯಾರ್ಥಿಗಳು, ಯುವಜನರು ಹೆಚ್ಚಿನ ಮಹತ್ವ, ಪ್ರಾಮುಖ್ಯತೆ ನೀಡಬಾರದು. ಮಾಹಿತಿ ಎನ್ನುವುದು ಇಂದು ನಿಮ್ಮ ಕೈ ತುದಿಯಲ್ಲೇ ಇರುತ್ತದೆ. ಅವುಗಳನ್ನು ಉತ್ತಮ ಜ್ಞಾನ ಬೆಳೆಸಿಕೊಳ್ಳುವುದಕ್ಕೆ ಮತ್ತು ದೇಶದ ಅಭ್ಯುದಯಕ್ಕಾಗಿ ಬಳಸಿಕೊಳ್ಳಬೇಕು. ಅಬ್ದುಲ್ ಕಲಾಂ ಅವರ ಕಲ್ಪನೆಯಂತೆ ಪ್ರತಿಯೊಬ್ಬರೂ ಕನಸು ಕಾಣಬೇಕು ಮತ್ತು ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಗುರಿ ತಲುಪುವುದಕ್ಕೆ ಪರಿಶ್ರಮ ಮತ್ತು ಜ್ಞಾನ ಅವಶ್ಯಕ. ಗುರಿ ತಲುಪುವ ಹಾದಿಯಲ್ಲಿ ಕೆಲವೊಮ್ಮೆ ಸೋಲು ಎದುರಾಗುತ್ತದೆ. ಅದಕ್ಕೆ ಅಂಜದೆ ಗೆಲುವಿನ ಮೆಟ್ಟಿಲಾಗಿಸಿಕೊಳ್ಳುವಂತೆ ಸಲಹೆ ನೀಡಿದರು.

‘ವಸುದೈವ ಕುಟುಂಬಕಂ’ ತತ್ವದಡಿ ಎಲ್ಲರೂ ನಡೆಯಬೇಕು. ಐದು ಸಾವಿರ ವರ್ಷಗಳ ಹಿಂದಿನ ತತ್ವಶಾಸ್ತ್ರ ಜಾಗತಿಕ ಶಾಂತಿ ಮತ್ತು ಶಾಂತಿಯ ಸಂದೇಶವನ್ನು ಸಾರುತ್ತಿದೆ. ಅದನ್ನು ಎಂದಿಗೂ ಹಾಳುಮಾಡಬಾರದು. ಕೆಲವರು ಇದನ್ನೇ ವಿನಾಶ ಎಂದು ಪರಿಭಾವಿಸಿದ್ದಾರೆ. ಇದು ತಪ್ಪುಕಲ್ಪನೆ ಎಂದು ಸಮಜಾಯಿಸಿ ನೀಡಿದರು.

ತಾಯಿ ಮತ್ತು ತಾಯಿ ನಾಡು ಎಂದಿಗೂ ಮರೆಯಬಾರದು. ದೇಶ ಎಲ್ಲಕ್ಕಿಂತ ಮೊದಲಾಗಬೇಕು. ರಾಷ್ಟ್ರೀಯತೆಯ ಅಭಿಮಾನವನ್ನು ಪ್ರತಿಯೊಬ್ಬರೂ ತೋರ್ಪಡಿಸಬೇಕು. ಅದು ರಾಷ್ಟ್ರದಲ್ಲಿ ಶುರುವಾಗಿದೆ. ಅದನ್ನು ಮುನ್ನಡೆಸಿಕೊಂಡು ಹೋಗಬೇಕು. ಮಾತೃಭೂಮಿಗೆ ನಿಮ್ಮದೇ ಕೊಡುಗೆ ನೀಡುವುದಕ್ಕೆ ಶ್ರಮಿಸಿ ವಿಕಸಿತ ಭಾರತದ ಶಿಲ್ಪಿಗಳಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿವೇಕಾನಂದರು ಹೇಳುವಂತೆ ‘ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ’ ಎಂಬ ಮಾತಿನಂತೆ ಒಳ್ಳೆಯ ಕೆಲಸ ಮಾಡುವುದಕ್ಕೆ ಹಿಂಜರಿಕೆ ಬೇಡ. ಏಕೆಂದರೆ ನಾವು ವಿಕಸಿತ ಭಾರತದತ್ತ ಮುನ್ನಡೆಯುತ್ತಿದ್ದೇವೆ. ಅದಕ್ಕಾಗಿ ದೇಶದ ಯುವಜನರು ಮಹತ್ವದ ಕೊಡುಗೆ ನೀಡುವುದಕ್ಕೆ ಸಜ್ಜಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಉಪರಾಷ್ಟ್ರಪತಿ ಪತ್ನಿ ಡಾ.ಸುದೇಶ್ ಧನಕರ್, ಗುಜರಾತ್‌ನ ಶ್ರೀಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ, ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ.ಶೇಖರ್ ಹಾಜರಿದ್ದರು.