ಸಾರಾಂಶ
ದೊಡ್ಡಬಳ್ಳಾಪುರ: ಭಾರತ ಇಂದು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಮುಂಚೂಣಿ ಎಲ್ಲ ಕ್ಷೇತ್ರಗಳಲ್ಲಿ ತನ್ನ ಬಲಿಷ್ಠ ಪ್ರಾಬಲ್ಯ ಸಾಧಿಸುತ್ತಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹೇಳಿದರು.
ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಉಪವಿಭಾಗ ಮತ್ತು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ 79ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ನೂರಾರು ವರ್ಷಗಳ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ನಮ್ಮ ದೇಶ ಸ್ವತಂತ್ರವಾದ ಅತ್ಯಂತ ಪವಿತ್ರವಾದ ಈ ದಿನದಂದು ನಾವೆಲ್ಲರೂ ಸಹ ಭಾರತೀಯರು ಎನ್ನುವುದಕ್ಕೆ ಅಭಿಮಾನ ಪಡಬೇಕು. ಜಗತ್ತಿಗೆ ಆಧ್ಯಾತ್ಮಿಕ ಚಿಂತನೆಯನ್ನು ನೀಡಿ, ಧಾರ್ಮಿಕತೆಯ ಮಹತ್ವ ವನ್ನು ತಿಳಿಸಿಕೊಟ್ಟ ದೇಶ ನಮ್ಮ ಭಾರತ ಎಂದು ಅವರು ಹೇಳಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನದ ಪರಂಪರೆ ಎಂದೆಂದೂ ಅಮರ ಎಂದರು.ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಸ್ವಾತಂತ್ರವು ಒಂದು ದಿನದಲ್ಲಿ ಬಂದದ್ದಲ್ಲ. ದಶಕಗಳ ಹೋರಾಟ, ಅನೇಕ ಸತ್ಯಾಗ್ರಹ, ಕಾರಾಗೃಹ ಜೀವನ, ನಿರ್ಭಯವಾದ ಬಲಿದಾನಗಳ ಫಲವಾಗಿ ನಮಗೆ ಸ್ವಾತಂತ್ರ್ಯ ಬಂದಿದೆ ಎಂದರು. ದೊಡ್ಡಬಳ್ಳಾಪುರಕ್ಕೆ ಬರುವ ವಲಸಿಗರೂ ಇಲ್ಲೇ ನೆಲೆನಿಲ್ಲಲು ಯತ್ನಿಸುತ್ತಾರೆಯೇ ಹೊರತು ಬಿಟ್ಟು ಹೋಗುವ ಚಿಂತನೆ ಮಾಡುವುದಿಲ್ಲ ಎಂಬುದು ಈ ನೆಲದ ಅನನ್ಯ ಗುಣವಾಗಿದೆ. ಸ್ವಚ್ಚ ನಗರದ ಅಭಿವೃದ್ದಿಗೆ ಹೆಚ್ಚು ಹೊತ್ತು ನೀಡಿ ಕೆಲಸ ಮಾಡಬೇಕಾಗಿದೆ ಎಂದರು.ಆಕರ್ಷಕ ಪರೇಡ್; ಗಣ್ಯರಿಗೆ ಸನ್ಮಾನ:
ಇದಕ್ಕೂ ಮುನ್ನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೊಲೀಸ್ ದಳ, ಸೇವಾದಳ, ಎನ್‌ಸಿಸಿ, ಎನ್‌ಎಸ್‌ಎಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ, ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.--------------15ಕೆಡಿಬಿಪಿ2-
ದೊಡ್ಡಬಳ್ಳಾಪುರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರನ್ನು ಸನ್ಮಾನಿಸಲಾಯಿತು.