ಜಾಗತಿಕವಾಗಿ ಮಾನವ ಸಂಪನ್ಮೂಲದ ಕೊರತೆ ಇದೆ. ಆದರೆ ಯುವ ರಾಷ್ಟ್ರವಾಗಿರುವ ಭಾರತದಲ್ಲಿ ಮೆಡಿಕಲ್ ಸಹಿತ ನರ್ಸಿಂಗ್ ಸೇವೆಯ ಬಗ್ಗೆ ಭರವಸೆ ಮತ್ತು ವಿಶ್ವಾಸ ಜಾಗತಿಕವಾಗಿ ಹೆಚ್ಚುತ್ತಿದೆ. ವೇಗದ ಆರ್ಥಿಕತೆ ಹೊಂದಿರುವ ದೇಶದ 140 ಕೋಟಿ ಜನಸಂಖ್ಯೆಯಲ್ಲಿ 64 ಕೋಟಿ ಯುವ ಜನತೆಯ ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜಾಗತಿಕವಾಗಿ ಮಾನವ ಸಂಪನ್ಮೂಲದ ಕೊರತೆ ಇದೆ. ಆದರೆ ಯುವ ರಾಷ್ಟ್ರವಾಗಿರುವ ಭಾರತದಲ್ಲಿ ಮೆಡಿಕಲ್ ಸಹಿತ ನರ್ಸಿಂಗ್ ಸೇವೆಯ ಬಗ್ಗೆ ಭರವಸೆ ಮತ್ತು ವಿಶ್ವಾಸ ಜಾಗತಿಕವಾಗಿ ಹೆಚ್ಚುತ್ತಿದೆ. ವೇಗದ ಆರ್ಥಿಕತೆ ಹೊಂದಿರುವ ದೇಶದ 140 ಕೋಟಿ ಜನಸಂಖ್ಯೆಯಲ್ಲಿ 64 ಕೋಟಿ ಯುವ ಜನತೆಯ ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಮಿಜಾರಿನ ಶೋಭಾ ಮೋಹನ್ ಆಳ್ವ ಆವರಣದಲ್ಲಿನ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಸೋಮವಾರ ಸಂಜೆ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ಮಿಜಾರಿನಲ್ಲಿ ಆರಂಭಗೊಂಡ ಆಳ್ವಾಸ್ ಮೆಡಿಕಲ್ ಕಾಲೇಜನ್ನು ದೀಪ ಪ್ರಜ್ವಲನದ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಉತ್ಪಾದನೆ, ರಫ್ತು ಸಹಿತ ಆರ್ಥಿಕ ಶಕ್ತಿಯಾಗಿ ಬೆಳೆಯುವ ಮೂಲಕ 21ನೇ ಶತಮಾನ ಭಾರತದ್ದಾಗಲಿದ್ದು ಅಪಾರ ಅವಕಾಶ ಬಳಸಿಕೊಂಡು ಸಮಕಾಲೀನ ಅಗತ್ಯ ಹೊಸ ಚಿಂತನೆಗಳೊಂದಿಗೆ ಬೆಳೆದು ಜಾಗತಿಕ ಮೆಡಿಕಲ್ ಹಬ್ ಆಗುವತ್ತ ವಿಕಸಿತ ಭಾರತ ಮುನ್ನಡೆದಿದೆ ಎಂದರು.ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರಸ್ತುತ ಎರಡೂವರೆ ಲಕ್ಷ ಕೋಟಿ ರು. ಮೀಸಲಿಡಲಾಗಿದೆ. ವೈದ್ಯಕೀಯ ಕಾಲೇಜು ಸೇರಿದಂತೆ ಸ್ನಾತಕೋತ್ತರ ಪದವಿ ಹಾಗೂ ಯೂನಿವರ್ಸಿಟಿಗಳು ಹೆಚ್ಚುತ್ತಲೇ ಇವೆ. ವಿಶೇಷವಾಗಿ ಮೆಡಿಕಲ್ ಸೀಟುಗಳನ್ನು 51 ಸಾವಿರದಿಂದ 1.40 ಲಕ್ಷ ದಷ್ಟು ಏರಿಕೆ ಮಾಡಲಾಗಿದೆ. ಜಗತ್ತಿಗೆ ವೈದ್ಯಕೀಯ ಸೇವೆ ಭಾರತದಿಂದ ಲಭ್ಯವಾಗುವ ಬೆಳವಣಿಗೆಗಳು ನಡೆದಿವೆ ಎಂದ ಅವರು ಶೈಕ್ಷಣಿಕ ಒತ್ತಡದಿಂದ ಕಾಲೇಜುಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಾರ್ಥಿಗಳ ಪ್ರಕರಣಗಳ ಬಗ್ಗೆಯೂ ನಾವು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.
ಆರ್‌ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್.ತಿಪ್ಪೇಸ್ವಾಮಿ ಮಾತನಾಡಿ, ಸೃಜನಶೀಲ ಅನ್ವೇಷಣಾತ್ಮಕ ಮಾದರಿ ಶಿಕ್ಷಣ ನೀಡುವ ಮೂಲಕ ಡಾ.ಮೋಹನ ಆಳ್ವ ಮತ್ತು ಅವರ ಸಂಸ್ಥೆಗಳು ಮಾದರಿಯಾಗಿ ಮೂಡಿ ಬೆಳೆದಿವೆ ಎಂದರು.ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಎಲ್ಲರಿಗೂ ಕೈಗೆಟಕುವ ಗುಣಮಟ್ಟದ ಹೆಲ್ತ್ ಕೇರ್ ಪ್ರಧಾನಿ ಕನಸು. ವಿಶೇಷವಾಗಿ ಟಿಬಿ ಮುಕ್ತ ಭಾರತದ ಅಭಿಯಾನಕ್ಕೂ ನಾವು ಕೈ ಜೋಡಿಸಬೇಕಾಗಿದೆ. ದಕ ಜಿಲ್ಲೆಯನ್ನು ಮೆಡಿಕಲ್ ಹಬ್ ಆಗಿಸುವಲ್ಲಿ ಮೆಡಿಕಲ್, ಸ್ಪಿರಿಚುವಲ್ ಹೀಲಿಂಗ್ ಕ್ಯಾಪಿಟಲ್ ಆಗಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ದೇಶದ ದೊಡ್ಡ ವಿವಿಯಾಗಿರುವ ರಾಜೀವ ಗಾಂಧಿ ಆರೋಗ್ಯ ವಿವಿಯ ಯಶಸ್ಸಿನಲ್ಲಿ ಆಳ್ವಾಸ್ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ವೈದ್ಯಕೀಯ ಶಿಕ್ಷಣದ ಮಕ್ಕಳಲ್ಲೂ ಉತ್ತಮ ಕಲಾತ್ಮಕ, ಅಧ್ಯಾತ್ಮಿಕ ಮನಸ್ಸು, ಸೌಂದರ್ಯ ಪ್ರಜ್ಞೆಯ ಜೀವನೋಲ್ಲಾಸ ಮೂಡಿಸುವ ಕನಸು ನಮ್ಮದಾಗಿದೆ ಎಂದರು. ವೃತ್ತಿ ಮತ್ತು ಬದುಕಿನ ಭಾಗವಾಗಿದ್ದ ಕುಟುಂಬಿಕರು, ಬಂಧುಗಳು ಮತ್ತು ಉದ್ಯೋಗಿಗಳ ಸಹಕಾರವನ್ನು ಭಾವುಕರಾಗಿ ಸ್ಮರಿಸಿಕೊಂಡ ಅವರು ಎಲ್ಲರ ಸಹಕಾರದಿಂದ ಕನಸು ನನಸಾಗಿದೆ ಎಂದರು.ಬಾಕ್ಸ್.....
ಶೀಘ್ರ ಡೀಮ್ಡ್ ವಿ.ವಿ.ಯಾಗಿಆಳ್ವಾಸ್: ಜೋಶಿ ಭರವಸೆ:ಆಳ್ವಾಸ್ ಶಿಕ್ಷಣ ಸಂಸ್ಥೆಗಳೆಲ್ಲವನ್ನೂ ಸಮಗ್ರವಾಗಿ ಡೀಮ್ಡ್ ವಿಶ್ವವಿದ್ಯಾನಿಲಯದ ಸ್ಥಾನಮಾನದಡಿ ತರಬೇಕೆಂಬ ಡಾ. ಎಂ.ಮೋಹನ ಆಳ್ವರ ಕನಸು ಶೀಘ್ರ ನನಸಾಗಲಿದೆ. ಈ ಕುರಿತ ಅರ್ಜಿ ಕೇಂದ್ರ ಸರ್ಕಾರದ ಮುಂದಿದ್ದು ಕೆಲವೊಂದು ಅಂಶಗಳ ಬಗ್ಗೆ ಸ್ಪಷ್ಟೀಕರಣ ದೊರೆತಲ್ಲಿ ಒಂದು ತಿಂಗಳೊಳಗೆ ಈ ಸ್ಥಾನ ಮಾನ ಘೋಷಣೆಯಾಗುವುದು ಖಚಿತ ಎಂದು ಕೇಂದ್ರ ಉನ್ನತ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದರು.