ಸಾರಾಂಶ
ಭಾರತದಲ್ಲಿರುವ ಜ್ಞಾನ ಸಂಪತ್ತಿನ ಫಲವಾಗಿ ಇಂದು ವಿಶ್ವಕ್ಕೆ ತಂತ್ರಜ್ಞಾನ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯ : ಭಾರತದಲ್ಲಿರುವ ಜ್ಞಾನ ಸಂಪತ್ತಿನ ಫಲವಾಗಿ ಇಂದು ವಿಶ್ವಕ್ಕೆ ತಂತ್ರಜ್ಞಾನ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಬಿ.ಸಿ.ದಾಸೇಗೌಡರ ಕುಟುಂಬ ವರ್ಗದ ವತಿಯಿಂದ ಆಡಳಿತ ತಜ್ಞ ಬಿ.ಜಿ.ದಾಸೇಗೌಡ ಕೃತಿ ಬಿಡುಗಡೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಶ್ವಕ್ಕೆ ಜ್ಞಾನ ನೀಡಿದ್ದ ಭಾರತ ಕಳೆದ 17-18ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ವೇಳೆ ಸರಿಯಾದ ರೀತಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳದೇ ಹಿಂದುಳಿಯಬೇಕಾಯಿತು ಎಂದರು.
17ನೇ ಶತಮಾನದಲ್ಲಿ ಭಾರತದ ಜಿಡಿಪಿ ಶೇ.23.5ರಷ್ಟಿತ್ತು. ಆ ದಿನಗಳಲ್ಲಿ 200ಕ್ಕೂ ಹೆಚ್ಚಿನ ದೇಶಗಳಿಗಿಂತ ಆರ್ಥಿಕ ಶ್ರೇಯಸ್ಸು ಹೆಚ್ಚಿನದ್ದಾಗಿತ್ತು. ಅಲ್ಲಿಯವರೆಗೂ ಜಗತ್ತು ಒಂದೇ ರೀತಿಯಲ್ಲಿ ಸಾಗುತಿತ್ತು. ನಮ್ಮ ದೇಶದಲ್ಲಿ ಜ್ಞಾನ ಹೆಚ್ಚಿತ್ತು. ಜನಗತ್ತಿನಲ್ಲಿ ಅಷ್ಟೇನೂ ಏರು ಪೇರು ಇಲ್ಲದ ಕಾರಣ ಸಮಾನವಾಗಿ ಸಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಮೊದಲ ಕೈಗಾರಿಕಾ ಕ್ರಾಂತಿ ಪ್ರಾರಂಭವಾದಾಗ ಅದನ್ನು ಭಾರತ ಸಮರ್ಪಕವಾಗಿ ಬಳಸಿಕೊಂಡು ಹೋಗದೆ ಹಿಂದುಳಿಯಿತು ಎಂದು ವಿವರಿಸಿದರು.
ಬಳಿಕ ಬ್ರಿಟಿಷರು ಭಾರತದಲ್ಲಿ ಆಡಳಿತ ಪ್ರಾರಂಭಿಸಿದರು. 1940ರ ದಶಕದಲ್ಲಿ ಡಾ.ಕೆ.ಲೆಸ್ಲಿ ಕೋಲ್ಮನ್ ಅವರು ಮಂಡ್ಯದಲ್ಲಿ ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು. ಅಂದು ಬೆಂಗಳೂರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಜಿ.ದಾಸೇಗೌಡರು ಕೋಲ್ಮನ್ ಕಣ್ಣಿಗೆ ಬಿದ್ದರು. ಅವರನ್ನು ಆಗ ಮೈಷುಗರ್‌ಗೆ ಕೆಮಿಸ್ಟ್ ಆಗಿ ನೇಮಕಗೊಂಡರು ಎಂದರು.
ದಾಸೇಗೌಡರ ಶ್ರದ್ಧೆ, ಆಸಕ್ತಿಯನ್ನು ಕಂಡ ಕೋಲ್ಮನ್ ಅವರು ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಸಕ್ಕರೆ ಕಾರ್ಖಾನೆಗಳ ಸ್ಥಿತಿ, ಗತಿ, ಉತ್ಪಾದನೆ, ಆಡಳಿತ ವ್ಯವಸ್ಥೆ, ಮಾರುಕಟ್ಟೆ ವಿವಿಧ ವಿಚಾರಗಳ ಕುರಿತ ಅಧ್ಯಯನಕ್ಕಾಗಿ ಕಳುಹಿಸಿದ್ದರು. ಎಲ್ಲವನ್ನೂ ಅರಿತ ಬಿ.ಜಿ.ದಾಸೇಗೌಡರು ವಾಪಸ್ ಬಂದು ಮತ್ತೆ ಕಾರ್ಖಾನೆಯಲ್ಲಿ ಕೆಲಸಕ್ಕೆ ನಿಯೋಜಿತರಾದರು. ಅವರನ್ನು 1949ರಲ್ಲಿ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಾಗಿ ಕೋಲ್ಮನ್‌ರಿಂದ ನೇಮಕಗೊಳ್ಳುತ್ತಾರೆ ಎಂದು ವಿವರಿಸಿದರು.
ಗುರುಗಿಂತ ಶಿಷ್ಯ ಹೆಚ್ಚು ಬೆಳೆದಾಗ ಗುರುವಿಗೆ ಖುಷಿಯಾಗುತ್ತೆ. ಅದರಂತೆ ಕೋಲ್ಮನ್ ಅವರಿಂದ ನಿಯೋಜಿಸಲ್ಪಟ್ಟ ದಾಸೇಗೌಡರು ಕೇವಲ ಕಾರ್ಖಾನೆ ಆಡಳಿತ ನೋಡಿಕೊಳ್ಳುವುದರಲ್ಲೇ ಕಾಲ ಕಳೆಯಲಿಲ್ಲ. ಜೊತೆಗೆ ಹತ್ತು ಹಲವು ಸಾಮಾಜಿಕ ಸೇವಾ ಕಾರ್‍ಯಗಳಲ್ಲೂ ತೊಡಗಿಸಿಕೊಂಡರು ಎಂದರು.
ಕೃತಿ ಬಿಡುಗಡೆ ಮಾಡಿದ ಕೃಷಿಕ್ ಫೌಂಡೇಷನ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಮೈಷುಗರ್‌ಗೆ ಕಬ್ಬು ಸರಬರಾಜು ಮಾಡಲು ರೈತರು ಹಗಲು ರಾತ್ರಿ ಕಾಯುತ್ತಿದ್ದರು. ಅದರಲ್ಲಿ ನಾನೂ ಕೂಡ ಒಬ್ಬನಾಗಿದ್ದೆ ಎಂದು ಅಂದಿನ ಕಾರ್ಖಾನೆ ಘತವೈಭವ ನೆನಪಿಸಿಕೊಂಡರು.
ಸರ್ಕಾರ, ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಕೆಲವು ಆಂತರಿಕ ಧೋರಣೆಯಿಂದಾಗಿ ಕಾಖಾ ದನೆ ದುಸ್ಥಿತಿಗೆ ತಲುಪಿದಾಗ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿತ್ತು. ಅದನ್ನು ವಿರೋಧಿಸಿ ರೈತರು ಹೋರಾಟ ಮಾಡಿದ್ದರ ಫಲವಾಗಿ ಇದೀಗ ಸರ್ಕಾರ ಪುನಶ್ಚೇತನಕ್ಕೆ ಮುಂದಾಗಿದೆ ಎಂದರು.
ಭಟ್ಟಾಚಾರ್‍ಯ, ಚಿಕ್ಕಣ್ಣ, ಬಾಲಸುಬ್ರಹ್ಮಣ್ಯಂ, ಮೋಹನ್‌ದಾಸ್‌ರಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಕಾರ್ಖಾನೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲೇ ಕಾಖಾನೆ ನಡೆಯುವಂತಾಗಬೇಕು. ಇಲ್ಲಿ ನಿಗಧಿಯಾದ ದರ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕೊಡುತ್ತವೆ. ಇದು ಜಿಲ್ಲೆಯ ರೈತರ ಹೆಮ್ಮಮೆಯ ವಿಷಯವಾಗಿದೆ ಎಂದರು.
ಕಾರ್ಖಾನೆ ಪ್ರಾರಂಭವಾದ ಸಮಯದಲ್ಲಿ ಕೆಮಿಸ್ಟ್ ಆಗಿ ಬಂದ ದಾಸೇಗೌಡರು ನಂತರದ ದಿನಗಳಲ್ಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿ ಸುಮಾರು 16ವರ್ಷ ಕೆಲಸ ಮಾಡಿದ್ದಾರೆ. ಇಷ್ಟು ವರ್ಷ ಜಿಎಂ ಆಗಿ ಯಾರೂ ಆಡಳಿತ ಮಾಡಿಲ್ಲ ಎಂದರು.
ಸಮಾರಂಭದಲ್ಲಿ ವಿಶ್ವಮಾನವ ಕ್ಷೇತ್ರದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಷುಗರ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಬಿ.ಮೋಹನ್‌ದಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ರೈತ ಮುಖಂಡ ಕೆ. ಬೋರಯ್ಯ, ಕೃತಿಕರ್ತ ಲೋಕೇಶ್ ಚಂದಗಾಲು ಇತರರು ಭಾಗವಹಿಸಿದ್ದರು.