ಸಾರಾಂಶ
ರಾಣಿಬೆನ್ನೂರು: ಪ್ರಧಾನಿ ಮೋದಿ ದಕ್ಷ ಆಡಳಿತದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸಾಧನೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ತಾಲೂಕಿನ ನೂಕಾಪುರ, ರಾಮಪುರ, ಗುಡಗೂರ, ವೈಟಿ ಹೊನ್ನತ್ತಿ, ಚಂದಾಪುರ, ಚೌಡಯ್ಯದಾನಪುರ ಗ್ರಾಮಗಳಲ್ಲಿ ಮಂಗಳವಾರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತ ಯಾಚಿಸುವ ಜತೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ವಿತರಿಸಿ ಅವರು ಮಾತನಾಡಿದರು. ದೇಶ ಅಭಿವೃದ್ಧಿ ಪಥದಲ್ಲಿ ನಾಗಾಲೋಟದಲ್ಲಿ ಸಾಗುತ್ತಿದ್ದು ರಾಜ್ಯದಲ್ಲಿಯೂ ರೇಲ್ವೆ ನಿಲ್ದಾಣಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಚಂದ್ರಯಾನ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿದ ವಿಶ್ವದ ಮೊದಲ ದೇಶವೆಂಬ ಸಾಧನೆ ಮಾಡಿದೆ. ಆರ್ಥಿಕತೆಯಲ್ಲಿಯೂ ಸಾಕಷ್ಟು ಪ್ರಗತಿ ಸಾಧಿಸಿದ್ದು ವಿಶ್ವದಲ್ಲಿ ಐದನೆ ಸ್ಥಾನಕ್ಕೆ ತಲುಪಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕ್ಷೇತ್ರದ ಮತದಾರರು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿಸಲು ಪಕ್ಷದ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಈ ವೇಳೆ ನೂಕಾಪುರ ಮತ್ತು ರಾಮಪುರ ಗ್ರಾಮದಲ್ಲಿ ಹಲವಾರು ಜನರು ಕಾಂಗ್ರೆಸ್ ಮತ್ತು ಅನ್ಯ ಪಕ್ಷ ತ್ಯಜಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಿದ್ಧು ಚಿಕ್ಕಬಿದರಿ, ನಗರಸಭಾ ಸದಸ್ಯ ನಿಂಗಪ್ಪ ಕೋಡಿಹಳ್ಳಿ, ಅಶೋಕ ಪಾಸಿಗಾರ, ಜಗದೀಶ ದೊಡ್ಮನಿ, ಪರಮೇಶಪ್ಪ ಕುದರಿಹಾಳ, ಪುಟ್ಟಪ್ಪ ವಟ್ಲಳ್ಳಿ, ಸೋಮು ಚಿಕ್ಕಹರಳಹಳ್ಳಿ, ಶಂಭಣ್ಣ ಭತ್ತದ, ಮಂಜಣ್ಣ ವಡ್ಡರ ಮತ್ತಿತರರಿದ್ದರು.