ನಮ್ಮ ದೇಶದ ಪ್ರಮುಖ ಪಟ್ಟಣಗಳಿಂದ ಪ್ರತಿ ವರ್ಷ ಹತ್ತು ಸಾವಿರ ಮಕ್ಕಳು ಬಲವಂತವಾಗಿ ಅವರ ಮನೆಗಳಿಂದ ಬೀದಿಗಳಿಗೆ ತಳ್ಳಲ್ಪಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಕೂಲಿ ಕಾರ್ಮಿಕರ, ರೈತರ ಮಕ್ಕಳೇ ಆಗಿರುವುದು ದುರಂತ ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಹಾಗೂ ಸಾಹಿತಿ ಬಿ.ಶ್ರೀನಿವಾಸ ಕಳವಳ ವ್ಯಕ್ತ ಪಡಿಸಿದ್ದಾರೆ.

- ಜಿಲ್ಲಾ ಕೋರ್ಟ್‌ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ ಕಳವಳ । ಮಕ್ಕಳಿಗೆ ಮಾರ್ಗದರ್ಶನ ಸಮಾರಂಭ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ದೇಶದ ಪ್ರಮುಖ ಪಟ್ಟಣಗಳಿಂದ ಪ್ರತಿ ವರ್ಷ ಹತ್ತು ಸಾವಿರ ಮಕ್ಕಳು ಬಲವಂತವಾಗಿ ಅವರ ಮನೆಗಳಿಂದ ಬೀದಿಗಳಿಗೆ ತಳ್ಳಲ್ಪಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಕೂಲಿ ಕಾರ್ಮಿಕರ, ರೈತರ ಮಕ್ಕಳೇ ಆಗಿರುವುದು ದುರಂತ ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಹಾಗೂ ಸಾಹಿತಿ ಬಿ.ಶ್ರೀನಿವಾಸ ಕಳವಳ ವ್ಯಕ್ತ ಪಡಿಸಿದರು.

ನಗರದ ಪಿ.ಜೆ. ಬಡಾವಣೆಯಲ್ಲಿರುವ ವನಿತಾ ಸಮಾಜದಲ್ಲಿ ಭಾನುವಾರ ಕರ್ನಾಟಕ ಶ್ರಮಿಕಶಕ್ತಿ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ರೈತ ಹಾಗೂ ಕಾರ್ಮಿಕರ ಮಕ್ಕಳಿಗೆ 8ನೇ ವರ್ಷದ ಅಭಿನಂದನಾ ಮತ್ತು ಮಾರ್ಗದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ದೇಶದ ಬೆನ್ನೆಲುಬೇ ಆದ ಶ್ರಮಿಕ ವರ್ಗಗಳ ಮಕ್ಕಳು ಹಸಿವು, ಬಡತನಗಳಲ್ಲಿ ಕಳೆದುಹೋಗುತ್ತಿದ್ದಾರೆ. ಬೀದಿಗಳನ್ನೇ ಆಸರೆ ಆಗಿಸಿಕೊಂಡಿದ್ದಾರೆ. ಭಾರತದ ಶೇ.80ಕ್ಕೂ ಹೆಚ್ಚು ಇಂತಹ ಶ್ರಮಿಕ ಜೀವಿಗಳ ಅವಶೇಷಗಳ ಅಡಿ ಇಂದಿನ ಭಾರತ ಅಡಗಿರುವುದು ವಿಷಾದನೀಯ ಎಂದು ಹೇಳಿದರು.

ನಮ್ಮ ನಿತ್ಯದ ಬದುಕಿನ ಜಂಜಾಟಗಳಲ್ಲಿ ಯಾರಿಗೂ ಅರಿವಾಗದಂತೆ ಬೆರೆತು ಹೋಗಿರುವ ಕೋಮುವಾದ ಎಂಬ ಹಿಂಸೆ ಅರ್ಥ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಈ ದೇಶದ ಜನರಿಗೆ ಆಹಾರ, ಆರೋಗ್ಯ ಮತ್ತು ಶಿಕ್ಷಣ ನೀಡುವುದು ಜನರಿಂದ ಆಯ್ಕೆಯಾದ ಪ್ರಜಾತಂತ್ರದ ಆದ್ಯ ಕರ್ತವ್ಯ. ಇದು ಕೈಗೂಡಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ಟೈರ್ಸ್‌ ಸಂಘದ ಅಧ್ಯಕ್ಷೆ ಪವಿತ್ರ ಮಾತನಾಡಿ, ಈ ದೇಶದಲ್ಲಿ ಯುವ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡುತ್ತಿರುವುದು ಭರವಸೆ ಮೂಡಿಸಿದೆ ಎಂದು ಹೇಳಿದರು.

ಕರ್ನಾಟಕ ಶ್ರಮಿಕ ಶಕ್ತಿಯ ರಾಜ್ಯ ಮುಖಂಡ ಸತೀಶ್ ಅರವಿಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಆದಿಲ್ ಖಾನ್, ಜಾಫರ್ ಶರೀಫ್, ಸೈಯದ್ ಅಶ್ಫಾಕ್, ಸುರೇಶ್ ಶಿಡ್ಲಪ್ಪ ಇತರರು ಇದ್ದರು.

- - -

(ಬಾಕ್ಸ್‌)

* ಅಂಕಗಳು ಬೌದ್ಧಿಕ ಸಾಮರ್ಥ್ಯದ ಅಳತೆ ಮಾತ್ರ: ಅರುಣ್‌

ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಒಬ್ಬ ವಿದ್ಯಾರ್ಥಿ ಯಶಸ್ಸು ಸಾಧಿಸಿದಾಗ ಕೇವಲ ಒಬ್ಬ ವ್ಯಕ್ತಿ ಮಾತ್ರ ಗೆಲ್ಲುವುದಿಲ್ಲ. ಆ ವಿದ್ಯಾರ್ಥಿಯ ಕುಟುಂಬ, ಶಿಕ್ಷಣ ನೀಡಿದ ಶಿಕ್ಷಕರು ಗೆಲ್ಲುತ್ತಾರೆ. ಮತ್ತು ಆ ವಿದ್ಯಾರ್ಥಿ ಬೆಳೆದ ಸಮಾಜ ಕೂಡ ಗೆಲ್ಲುತ್ತದೆ. ಅಂಕಗಳು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದ ಅಳತೆ ಮಾತ್ರ. ಅವು ಸಂಪೂರ್ಣ ವ್ಯಕ್ತಿತ್ವದ ಅಳತೆಯಲ್ಲ ಎಂದು ತಿಳಿಸಿದರು. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಅದು ಸ್ವತಂತ್ರ್ಯವಾಗಿ ಆಲೋಚಿಸುವ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಸರಿ ತಪ್ಪುಗಳನ್ನು ಗುರುತಿಸುವ ವಿವೇಕ ನೀಡುತ್ತದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯವನ್ನು ಬೆಳೆಸುತ್ತದೆ. ನಮ್ಮ ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ಅವಕಾಶಗಳ ಕೊರತೆಯಿಂದ ಅನೇಕ ಮಕ್ಕಳು ತಮ್ಮ ಪ್ರತಿಭೆಯನ್ನು ಪೂರ್ಣವಾಗಿ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ನೆರವಾಗುವುದು ಕೇವಲ ಸರ್ಕಾರದ ಕರ್ತವ್ಯವಲ್ಲ. ಅದು ಸಮಾಜದ ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ ಎಂದು ಅಭಿಪ್ರಾಯಪಟ್ಟರು.

- - -

-11ಕೆಡಿವಿಜಿ41:

ದಾವಣಗೆರೆಯಲ್ಲಿ ರೈತ ಹಾಗೂ ಕಾರ್ಮಿಕರ ಮಕ್ಕಳಿಗೆ ಅಭಿನಂದನಾ, ಮಾರ್ಗದರ್ಶನ ಸಮಾರಂಭವನ್ನು ಸಾಹಿತಿ ಬಿ.ಶ್ರೀನಿವಾಸ್‌ ಉದ್ಘಾಟಿಸಿದರು.