ಸಾರಾಂಶ
ಸಂಸ್ಥೆಯು 149 ದೇಶಗಳಲ್ಲಿ ಪ್ರಮುಖ ಸದಸ್ಯತ್ವ ಪಡೆದಿದೆ. 75 ವರ್ಷಗಳಿಂದ ದೇಶದ 18 ರಾಜ್ಯಗಳಲ್ಲಿ ಲೈಂಗಿಕ ಮತ್ತು ಪ್ರಜನನ ಆರೋಗ್ಯದ ಹಕ್ಕುಗಳ ಮಾಹಿತಿ, ಸೇವೆಗಳನ್ನು ಸಮಾನ ಅವಕಾಶದೊಂದಿಗೆ ನೀಡಲು ಬದ್ಧವಾಗಿದೆ.
ಧಾರವಾಡ:
ಕುಟುಂಬ ಯೋಜನೆಯ ಬಗ್ಗೆ ನೀತಿಗಳನ್ನು ಪರಿಚಯಿಸಿದ ವಿಶ್ವದ ಮೊದಲ ದೇಶ ಭಾರತ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ (ಎಫ್‌ಪಿಎಐ) ರಾಷ್ಟ್ರೀಯ ಅಧ್ಯಕ್ಷೆ ಡಾ. ರತ್ನಮಾಲಾ ದೇಸಾಯಿ ನುಡಿದರು.ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆದ ಎಫ್‌ಪಿಎಐ 75ನೇ ವರ್ಷದ ವಜ್ರ ಮಹೋತ್ಸವ ಉದ್ಘಾಟಿಸಿದ ಅವರು, ಕುಟುಂಬ ಯೋಜನೆ, ಅಗತ್ಯತೆ ನಿರಂತರ ಪ್ರತಿಪಾದಿಸಿದ ಪರಿಣಾಮವಾಗಿ ದೇಶದ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ (1952) ಇದರ ಪರಿಚಯವಾಯಿತು ಎಂದರು.
ಸಂಸ್ಥೆಯು 149 ದೇಶಗಳಲ್ಲಿ ಪ್ರಮುಖ ಸದಸ್ಯತ್ವ ಪಡೆದಿದೆ. 75 ವರ್ಷಗಳಿಂದ ದೇಶದ 18 ರಾಜ್ಯಗಳಲ್ಲಿ ಲೈಂಗಿಕ ಮತ್ತು ಪ್ರಜನನ ಆರೋಗ್ಯದ ಹಕ್ಕುಗಳ ಮಾಹಿತಿ, ಸೇವೆಗಳನ್ನು ಸಮಾನ ಅವಕಾಶದೊಂದಿಗೆ ನೀಡಲು ಬದ್ಧವಾಗಿದೆ. ಸಮುದಾಯವನ್ನು ಸಬಲೀಕರಿಸುವುದು ಮತ್ತು ಎಲ್ಲರಿಗೂ ಆರೋಗ್ಯಕರ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುವುದೇ ಸಂಸ್ಥೆ ಪ್ರಮುಖ ಉದ್ದೇಶ ಎಂದರು.ಸಂಸ್ಥೆಯ ಕೇಂದ್ರ ಕಾರ್ಯಕಾರಣಿ ಹೇಮಲ್ ದೇಸಾಯಿ, ಈ ವರ್ಷ ಎಫ್‌ಪಿಎ ಇಂಡಿಯಾ 1 ಕೋಟಿ ಯುವ ಮಹಿಳೆಯರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷೆ ಡಾ. ಸಂಗಿತಾ ಮಾನೆ ಮಾತನಾಡಿದರು. ಗಮನಾರ್ಹ ಸೇವೆ ಸಲ್ಲಿಸಿದ ಡಾ. ರತ್ನಮಾಲಾ ಎಂ. ದೇಸಾಯಿ, ಡಾ. ಎಂ.ಎನ್. ತಾವರಗೇರಿ, ಡಾ. ರಾಜನ್ ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸ್ವಯಂಸೇವಕರಾದ ಪ್ರೊ. ಉರ್ಷಾ ಮೂರ್ತಿ, ವಿ.ವಿ. ಕಟ್ಟಿ, ಇಂದಿರಾ ಪ್ರಸಾದ, ರಮಾಕಾಂತ ಜೋಶಿ, ಹರ್ಷ ದೇಸಾಯಿ, ಪಿ.ಪಿ. ಗಾಯಕವಾಡ, ವಿ.ಎಂ. ಕೋಳಿವಾಡ, ತುಷಾರ ದೇಶಮುಖ ಮತ್ತು ಎಸ್.ವಿ. ಕುಲಕರ್ಣಿ, ಶಾಖಾ ವ್ಯವಸ್ಥಾಪಕಿ ಸುಜಾತಾ ಎಸ್. ಆನಿಶೆಟ್ಟರ, ಡಾ. ಶಶೀಧರ ನರೇಂದ್ರ, ಮಧುವಂತಿ ಹಿರೇಮಠ, ಎನ್.ಎಫ್. ಮಡಿವಾಳರ, ಶ್ರೇಯಾ ಸಾಳಂಕೆ ಇದ್ದರು.