ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವು ಪ್ರಜಾಪ್ರಭುತ್ವದ ಬೆನ್ಎಲುಬಾಗಿದೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವು ಪ್ರಜಾಪ್ರಭುತ್ವದ ಬೆನ್ನೆಲುಬಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ಸಂವಿಧಾನವು ಸ್ವಾತಂತ್ರ್ಯದ ರಕ್ಷಣೆಯಾಗಿದ್ದು, ಪ್ರತಿಯೊಬ್ಬರಲ್ಲೂ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಭಾರತೀಯ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಎತ್ತಿ ಹಿಡಿದಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.

ಭಾರತೀಯರು ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯ ಎತ್ತಿ ಹಿಡಿಯಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮುಂದಾಗಬೇಕು ಎಂದರು.

ವಿಶ್ವಕ್ಕೆ ಮಾದರಿ:

ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಭಾರತ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಸಂಚಾಲಕರಾದ ದೀಪಕ್ ಪೊನ್ನಪ್ಪ ಅವರು ಮಾತನಾಡಿ, 1946 ರಲ್ಲಿ ಸ್ವಾತಂತ್ರ್ಯ ಭಾರತಕ್ಕೆ ಸಂವಿಧಾನ ರೂಪಿಸಲು ರಚನಾ ಸಭೆ ಸ್ಥಾಪನೆಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರೂಪಿಸಲಾಯಿತು ಎಂದರು.

ಸಂವಿಧಾನ ರಚನಾ ಸಭೆಯು 1949 ರ ನ. 26 ರಂದು ಸಂವಿಧಾನವನ್ನು ಅಂಗೀಕರಿಸಿತು. ರಾಷ್ಟ್ರದಲ್ಲಿ ಸಂವಿಧಾನವು 1950 ರ ಜನವರಿ, 26 ರಂದು ಜಾರಿಗೆ ಬಂದಿತು ಎಂದು ದೀಪಕ್ ಪೊನ್ನಪ್ಪ ಅವರು ಹೇಳಿದರು.

ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಮಾತನಾಡಿ ಭಾರತ ಸಂವಿಧಾನದಲ್ಲಿರುವ ಮೌಲ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಶಿಕ್ಷಣ ಪಡೆದು, ಸ್ವಾತಂತ್ರ್ಯ ಸಮಾನತೆ ಅವಕಾಶಗಳನ್ನು ಪಡೆಯುವಂತಾಗಬೇಕು ಎಂದು ಅವರು ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಅವರು ಸಂವಿಧಾನ ಪೀಠಿಕೆ ಓದಿದರು. ಭಾರತದ ಪ್ರಜೆಗಳಾದ ನಾವು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಹಾಗೂ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸಣೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆ ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ ನಮ್ಮ ಸಂವಿಧಾನ ಸಭೆಯಲ್ಲಿ 1949 ನ. 26 ರಂದು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂದು ಓದಿದರು.

ಸಂವಿಧಾನ ದಿನಾಚರಣೆ ಪ್ರಯುಕ್ತ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರಥಮ ಬಹುಮಾನ 25 ಸಾವಿರ ರು., ದ್ವಿತೀಯ 15 ಸಾವಿರ ರು. ಮತ್ತು ತೃತೀಯ 10 ಸಾವಿರವನ್ನು ಆರ್‍ಟಿಜಿಎಸ್ ಮೂಲಕ ನೀಡಲಾಯಿತು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಈ.ರಾಜು ಮತ್ತು ತಂಡದವರು ನಾಡಗೀತೆ ಮತ್ತು ಸಂವಿಧಾನ ಗೀತೆಯನ್ನು ಹಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷರಾದ ಮಂದ್ರಿರ ಮೋಹನ್ ದಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ತಹಸೀಲ್ದಾರ್ ಶ್ರೀಧರ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಚಾಲಕರಾದ ದಮಯಂತಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ದಿವಾಕರ, ಪ್ರಮುಖರಾದ ಕುಮಾರ, ಸಿದ್ದೇಶ್, ಚಂದನ್, ಇತರರು ಇದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ರಮೇಶ್ ನಿರೂಪಿಸಿ, ವಂದಿಸಿದರು.

ಗಮನ ಸೆಳೆದ ಜಾಥಾ:

ಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಮೈದಾನದಿಂದ ಗಾಂಧಿ ಭವನದವರೆಗೆ ಜಾಥಾ ನಡೆಯಿತು. ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಗರದ ಗಾಂಧಿ ಮೈದಾನದಲ್ಲಿ ಜಾಥಾಗೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಚಾಲನೆ ನೀಡಿದರು. ಜಾಥದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳು ಕುಣಿತ ಕಾರ್ಯಕ್ರಮ ಜರುಗಿತು.

ಹಾಗೆಯೇ ಜಾಥಾ ವಾಹನದಲ್ಲಿ ವಿದ್ಯಾರ್ಥಿಯೊಬ್ಬರು ಅಂಬೇಡ್ಕರ್ ವೇಷ ಧರಿಸಿ ಸಂವಿಧಾನ ಪುಸ್ತಕ ಹಿಡಿದು ಕೈ ತೋರಿಸುತ್ತಿದ್ದ ದೃಶ್ಯ ಮನ ಸೆಳೆಯಿತು.

ವಿವಿಧ ಶಾಲಾ-ಕಾಲೇಜಿನ ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಂವಿಧಾನದ ಮಹತ್ವ ಕುರಿತ ಘೋಷವಾಕ್ಯ ಪ್ರದರ್ಶನ ಗಮನ ಸೆಳೆಯಿತು. ಶಾಲಾ-ಕಾಲೇಜಿನ ಶಿಕ್ಷಕರು, ಉಪನ್ಯಾಸಕರು, ಅಧಿಕಾರಿಗಳು ಸಿಬ್ಬಂದಿ ಪಾಲ್ಗೊಂಡಿದ್ದರು. ನಗರಸಭೆ ಸದಸ್ಯರಾದ ಸತೀಶ್, ಪ್ರಮುಖರಾದ ದಿವಾಕರ, ಕುಮಾರ, ಸಿದ್ದೇಶ್, ಚಂದನ್ ಇತರರು ಇದ್ದರು.