ಭಾರತ ವಿವಿಧತೆಯಲ್ಲಿ ಐಕ್ಯತೆ ಸಾರಿದ ದೇಶ: ಪರಮೇಶ್

| Published : Mar 03 2024, 01:32 AM IST

ಸಾರಾಂಶ

ಭಾರತ ವಿವಿಧತೆಯಲ್ಲಿ ಐಕ್ಯತೆ ಸಾರಿದ ದೇಶವಾಗಿದೆ ಎಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದ್ದಾರೆ.

ಭಾರತ ಸಂವಿಧಾನ ಪೀಠಿಕೆ ಫಲಕ ಅನಾವರಣಗೊಳಿಸುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಭಾರತ ವಿವಿಧತೆಯಲ್ಲಿ ಐಕ್ಯತೆ ಸಾರಿದ ದೇಶವಾಗಿದೆ ಎಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದ್ದಾರೆ.

ಪುರಸಭಾ ಕಾರ್ಯಾಲಯದಿಂದ ಶನಿವಾರ ಪುರಸಭಾ ಕಾರ್ಯಾಲಯ ಆವರಣದಲ್ಲಿ ಭಾರತ ಸಂವಿಧಾನ ಪೀಠಿಕೆ ಫಲಕ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ದೇಶಗಳಲ್ಲಿ ಇರುವಂತ ಸಂವಿಧಾನವನ್ನು ಅಧ್ಯಯನ ಮಾಡಿದ ನಂತರ ನಮ್ಮ ದೇಶಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಂವಿಧಾನ ರಚಿಸಲಾಗಿದೆ.

ಸಮಾನತೆ ಮತ್ತು ಏಕತೆಯನ್ನು ಸಂವಿಧಾನ ನಮಗೆ ಕಲ್ಪಿಸಿಕೊಟ್ಟಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಸಂವಿಧಾನ ತಿಳಿಸಿದೆ ಎಂದ ಅವರು ಪುರಸಭೆ ಕಾರ್ಯಾಲಯದಲ್ಲಿ ಸಂವಿಧಾನ ಪೀಠಿಕೆ ಫಲಕ ಅನಾವರಣಗೊಳಿಸುವಂತೆ ಹೇಳಿದರು.

ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ, ಭಾರತದ ಸಂವಿಧಾನ ಜಗತ್ತಿನ ಸರ್ವಶ್ರೇಷ್ಠ ಗ್ರಂಥವಾಗಿದೆ, ಸಂವಿಧಾನ ಸ್ವಾತಂತ್ರ್ಯಕ್ಕೆ ಘನತೆ ತಂದುಕೊಟ್ಟಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾರತೀಯರಿಗೆ ದೇವರ ಸಮಾನ ರಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸಂವಿಧಾನ ಪೀಠಿಕೆ ಫಲಕ ಪುರಸಭೆ ಕಾರ್ಯಾಲಯ ದಲ್ಲಿ ಅನಾವರಣಗೊಳಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತು ಅಮೂಲ್ಯ ಸಲಹೆ ನೀಡಿದ ಸದಸ್ಯ ಟಿ.ದಾದಾಪೀರ್ ಅವರನ್ನು ಅಭಿನಂದಿಸಿದರು,ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಸಂವಿಧಾನ ಜೀವಸಂಕುಲಗಳ ಬದುಕನ್ನು ರಕ್ಷಿಸಲು ಕಾನೂನಿನ ಅಸ್ತ್ರ ವಾಗಿದೆ. ಸರ್ಕಾರಿ ಕಚೇರಿಗಳಲ್ಲಿ, ಸಂವಿಧಾನದ ಪ್ರಸ್ತಾವನೆ, ಆಶಯಗಳನ್ನು ಕಾರ್ಯರೂಪಕ್ಕೆ ತರುತ್ತದೆ. ಸರ್ಕಾರಿ ಕಚೇರಿಗಳು ಜಾತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗದೆ ಸಾರ್ವಜನಿಕ ಆಡಳಿತ ಕೇಂದ್ರಗಳಾಗಬೇಕು. ಆಗ ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಪರಸ್ಪರ ವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಪುರಸಭೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಪುರಸಭೆ ಸದಸ್ಯ ಟಿ.ದಾದಾಪೀರ್ ಒಳಗೊಂಡಂತೆ ಪುರಸಭೆ ಸರ್ವ ಸದಸ್ಯರು ಸೂಕ್ತ ಸಲಹೆ ಮತ್ತು ಸಹಕಾರ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಎಂ.ರಂಗನಾಥ್ ಮಾತನಾಡಿ, ನಾವೆಲ್ಲರೂ ಸಂವಿಧಾನದ ಫಲವಾಗಿ ಅಧಿಕಾರ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದರು.

ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್, ಪರಿಸರ ಅಭಿಯಂತರೆ ತಾಹಿರಾ ತಸ್ನೀಮ್, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್ವರಪ್ಪ, ಕಂದಾಯ ಅಧಿಕಾರಿ ಮಂಜುನಾಥ್, ನಲ್ಮ್ ಯೋಜನೆ ಅಧಿಕಾರಿ ಪ್ರಸನ್ನ, ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ನಿರೂಪಿಸಿದರು.2ಕೆಟಿಆರ್.ಕೆ.1ಃ

ತರೀಕೆರೆ ಪುರಸಭಾ ಕಾರ್ಯಾಲಯ ವತಿಯಿಂದ ಏರ್ಪಡಿಸಿದ್ದ ಭಾರತ ಸಂವಿಧಾನ ಪೀಠಿಕೆ ಫಲಕ ಅನಾವರಣ ಗೊಳಿಸುವ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರು ಪರಮೇಶ್, ಸದಸ್ಯರಾದ ಟಿ.ಎಂ.ಬೋಜರಾಜ್, ಟಿ.ದಾದಾಪೀರ್, ಟಿ.ಎಂ.ರಂಗನಾಥ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.