ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ

| Published : Nov 29 2024, 01:05 AM IST

ಸಾರಾಂಶ

ಸಂವಿಧಾನದಿಂದ ಸದೃಢ ಪ್ರಜಾಪ್ರಭುತ್ವ ಹೊಂದಲು ಸಹಕಾರಿಯಾಗಿದೆ.

ಬಳ್ಳಾರಿ: ವಿಶ್ವದ ಎಲ್ಲಾ ಸಂವಿಧಾನಗಳಿಗಿಂತಲೂ ಭಾರತ ಸಂವಿಧಾನ ಶ್ರೇಷ್ಠ ಎನಿಸಿಕೊಂಡಿದ್ದು ಸಂವಿಧಾನದಿಂದ ಸದೃಢ ಪ್ರಜಾಪ್ರಭುತ್ವ ಹೊಂದಲು ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಹೇಳಿದರು.

ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯ ಸಂಕೀರ್ಣದ ವಿಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಂವಿಧಾನ ಪ್ರಸ್ತಾವನೆ ಬೋಧಿಸಿ ಅವರು ಮಾತನಾಡಿದರು.

ಮೊದಲು ಸಂವಿಧಾನ ಜಾರಿಗೊಂಡಾಗ 395 ವಿಧಿಗಳು, 22 ಭಾಗ, 12 ಅನುಸೂಚಿಗಳನ್ನು ಹೊಂದಿದ್ದು, ಮೂಲ ಸಂವಿಧಾನ ಪ್ರತಿಗಳನ್ನು ಸಂಸತ್‌ನ ಗ್ರಂಥಾಲಯದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಪ್ರಸ್ತುತ 470 ವಿಧಿಗಳು, 25 ಭಾಗ, 12 ಅನುಸೂಚಿಗಳನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದರಲ್ಲದೆ, ಸಂವಿಧಾನ ರಚನೆಗೆ ಶ್ರಮಿಸಿದ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಕಾರ್ಯವನ್ನು ಸ್ಮರಿಸಿದರು.

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದ್ದು, ಜಾತಿ, ಧರ್ಮ, ಎಲ್ಲೆ ಮೀರಿ ನಾವೆಲ್ಲರೂ ಒಂದು ಎನ್ನುವ ಸಂಕಲ್ಪ ತೊಡಬೇಕಲ್ಲದೆ, ಪ್ರತಿಯೊಬ್ಬ ನಾಗರೀಕರು ರಾಷ್ಟ್ರದ ಏಕತೆ ಮತ್ತು ಅಖಂಡತೆ ಉಳಿಸಿಕೊಳ್ಳಲು ಶ್ರಮಿಸಬೇಕಿದೆ ಎಂದು ಹೇಳಿದರು.

ಜಿಲ್ಲಾ ನ್ಯಾಯಾಲದ ಕೌಟುಂಬಿಕ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ಅವರು ಮಾತನಾಡಿದರು.

ಜಿಲ್ಲಾ ನ್ಯಾಯಾಲಯದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ, ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಘವೇಂದ್ರ ಗೌಡ, ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ಪ್ರಮೋದ್, ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಾಸುದೇವ ಗುಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಸೇರಿದಂತೆ ಇತರೆ ನ್ಯಾಯಾಧೀಶರು, ಅಧಿಕಾರಿಗಳು-ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.

ಬಳ್ಳಾರಿಯ ಜಿಲ್ಲಾ ನ್ಯಾಯಾಲಯದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ ಉದ್ಘಾಟಿಸಿದರು.