ಭಾರತವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಗೌರವವನ್ನು ಆಯ್ಕೆ ಮಾಡಿಕೊಂಡ ರಾಷ್ಟ್ರವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣಿಬೆನ್ನೂರು: ಭಾರತವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಗೌರವವನ್ನು ಆಯ್ಕೆ ಮಾಡಿಕೊಂಡ ರಾಷ್ಟ್ರವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಸ್ಥಳೀಯ ನಗರಸಭಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತ್ರಿವರ್ಣಗಳಿಂದ ಕೂಡಿದ ನಮ್ಮ ರಾಷ್ಟ್ರ ಧ್ವಜ ಕೇವಲ ಬಟ್ಟೆಯ ತುಂಡಲ್ಲ. ಅದು ಭವಿಷ್ಯದ ಸಂಕೇತವಾಗಿದ್ದು ನಾಗರಿಕರ ಹಕ್ಕುಗಳಿಗೆ ರಕ್ಷಣೆ ನೀಡುತ್ತದೆ ಹಾಗೂ ಕನಸುಗಳಿಗೆ ಭದ್ರತೆ ಒದಗಿಸುತ್ತದೆ ಎಂದರು. ರಾಜ್ಯ ಸರ್ಕಾರ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸಮಬಾಳು ಎಂಬ ತತ್ವದ ಆಧಾರದ ಮೇಲೆ ದಿನದಲಿತರ, ದಮನಿತರ, ದುರ್ಬಲ ವರ್ಗದವರ, ರೈತರ, ಯುವ ಸಮುದಾಯದ ಮಹಿಳೆಯರ, ಮಕ್ಕಳ ಶ್ರೇಯೋಭಿವೃದ್ಧಿಗೆ ಅನೇಕ ಜನ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ನಗರ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ನಗರದಲ್ಲಿ ನಾಲ್ಕು ಕಡೆ ಹಾಗೂ ಗ್ರಾಮೀಣ ಭಾಗದ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಗರಡಿಮನೆಗಳನ್ನು ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಪಿಎಂಸಿಗೆ ಸೇರಿದ ಜಾನುವಾರು ಮಾರುಕಟ್ಟೆ ಜಾಗೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.ತಹಸೀಲ್ದಾರ್ ಆರ್.ಎಚ್.ಭಾಗವಾನ ಧ್ವಜಾರೋಹಣ ನೆರವೇರಿಸಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕರೇಗೌಡ ಬಾಗೂರ, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಪ್ಪ ಕೆಂಚರಡ್ಡಿ, ಹಾವೇರಿ ಜಿಲ್ಲಾ ಸಹಕಾರಿ ಹಾಲ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಬಿಇಒ ಶಾಮಸುಂದರ ಅಡಿಗ, ಪೌರಾಯುಕ್ತ ಎಫ್.ಐ. ಇಂಗಳಗಿ, ತಾಪಂ ಇಒ ಡಾ. ವೆಂಕಟೇಶ ಸಣ್ಣಬಿದರಿ, ಡಿವೈಎಸ್‌ಪಿ ಲೋಕೇಶ ಜೆ., ಸಿಡಿಪಿಒ ಪಾರ್ವತಿ ಹುಂಡೇಕಾರ, ಸರ್ಕಾರಿ ನೌಕರರ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಕೆಂಚರೆಡ್ಡಿ, ಕಂದಾಯ ಇಲಾಖೆ ಅಶೋಕ ಅರಳೇಶ್ವರ, ಹರೀಶ ಮತ್ತಿತರರು ಉಪಸ್ಥಿತರಿದ್ದರು.