ಸಾರಾಂಶ
ಕನ್ನಡಪ್ರಭ ವಾರ್ತೆ ನಿಡಗುಂದಿ
ಭಾರತ ದೇಶವು ಸಾರ್ವಭೌಮತೆಯ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ ಎಂದು ತಹಸೀಲ್ದಾರ ಎ.ಡಿ.ಅಮರವಾಡಿ ಹೇಳಿದರು.ಪಟ್ಟಣದ ಎಂಪಿಎಸ್ ಬಾಲಕರ ಶಾಲೆ ಆವರಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು, ಮನ, ಧನಗಳಿಂದ ತ್ಯಾಗ, ಬಲಿದಾನ ಮಾಡಿದ ಮಹಾನ್ ನಾಯಕರನ್ನು, ಅಸಂಖ್ಯಾತ ಯೋಧರನ್ನು ದೇಶಾಭಿಮಾನಿಗಳನ್ನು ಕೃತಜ್ಞತಾ ಭಾವನೆಯಿಂದ ನೆನೆಯುವುದು ಮತ್ತು ಅವರು ಆಶಿಸಿದಂತೆ ನಮ್ಮ ರಾಷ್ಟ್ರವನ್ನು ಇನ್ನಷ್ಟು ಅಭ್ಯುದಯದ ಪಥದಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಅಖಂಡತೆಯ ಪ್ರತೀಕವಾದ ನಮ್ಮ ಸಂವಿಧಾನದ ವಿದಿವಿಧಾನಗಳನ್ನು ನಾವು ಗೌರವಿಸಬೇಕು. ದೇಶ ಮತ್ತಷ್ಟು ಬಲಿಷ್ಠವಾಗಿಸಲು ಶ್ರಮಿಸಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ಬಡಿಗೇರ, ತಾಪಂ ಇಒ ವಿ.ಎಸ್.ಹಿರೇಮಠ, ಪಪಂ ಮುಖ್ಯಾಧಿಕಾರಿ ಸುರೇಶ ಪಾಟೀಲ, ತಾಪಂ ಎಡಿ ವೆಂಕಟೇಶ ವಂದಾಲ, ಹೆಸ್ಕಾಂ ಎಇಇ ಬಸವರಾಜ ಚಿತ್ತಾಪುರ ಸೇರಿದಂತೆ ಪಪಂ ಸದಸ್ಯರು ಗಣ್ಯರು ಇದ್ದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಶಾಲೆ ಮಕ್ಕಳು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಪುರಸ್ಕರಿಸಲಾಯಿತು.ತಾಪಂ ಕಚೇರಿಯಲ್ಲಿ 75ನೇ ಗಣರಾಜ್ಯೋತ್ಸವದಲ್ಲಿ ಆಡಳಿತಾಧಿಕಾರಿ ಡಿ.ಬಸವರಾಜ ಧ್ವಜಾರೋಹನ ನೆರವೇರಿಸಿದರು ತಾಪಂ ಇಒ ವಿ.ಎಸ್ ಹಿರೇಮಠ, ಸಿಬ್ಬಂದಿ ಇದ್ದರು.ಪಟ್ಟಣ ಪಂಚಾಯತಿ ಕಚೇರಿಯಲ್ಲಿ 75ನೇ ಗಣರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಎ.ಡಿ ಅಮರವಾಡಿ ಧ್ವಜಾರೋಹಣ ನೆರವೇರಿಸಿದರು. ಪ.ಪಂ ಸದಸ್ಯರು, ಸಿಬ್ಬಂದಿ ಇದ್ದರು.
ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಎ.ಡಿ ಅಮರವಾಡಿ ಧ್ವಜಾರೋಹಣ ನೆರವೇರಿಸಿದರು. ಕಂದಾಯ ಇಲಾಖೆ ಸಿಬ್ಬಂದಿ ಇದ್ದರು. ಜಿವಿವಿಎಸ್ ಕಾಲೇಜಿನಲ್ಲಿ ಸಂಸ್ಥೆ ಚೇರಮನ್ ಸಿದ್ಧಣ್ಣ ನಾಗಠಾಣ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಸಿಬ್ಬಂದಿ ಇದ್ದರು.