ಸಾರಾಂಶ
76ನೇ ಗಣರಾಜ್ಯೋತ್ಸವದ ಧ್ವಜಾರೋಹಣ । ಮೆಚ್ಚಗೆ ಪಡೆದ ಪೌರ ಕಾರ್ಮಿಕರಿಂದ ಪಥಸಂಚಲನ
ಕನ್ನಡಪ್ರಭ ವಾರ್ತೆ ಶಿವಮೊಗ್ಗವಿಶ್ವದ ಭೂಪಟದಲ್ಲಿ ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ ನಮ್ಮ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಜಿಲ್ಲಾ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ 76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ.ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ. ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ದಿನದಿಂದ ನಮ್ಮ ಸಂವಿಧಾನ ಜಾರಿಗೆ ಬಂದಿದೆ. ಅದುವೇ ಗಣರಾಜ್ಯ ದಿನ ಎಂದು ಹೇಳಿದರು.ಜಿಲ್ಲೆಯಲ್ಲಿ ಈವರೆಗೆ ಶಕ್ತಿ ಯೋಜನೆಯಡಿ 3.85 ಕೋಟಿ ಮಹಿಳೆಯರು ಪ್ರಯಾಣಿಸಿ ಈ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 4.84 ಲಕ್ಷ ಕುಟುಂಬಗಳು 332 ಕೋಟಿ ರು.ಮೊತ್ತದ ಸಬ್ಸಿಡಿ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 3.87 ಲಕ್ಷ ಫಲಾನುಭವಿ ಮಹಿಳೆಯರು ಈವರೆಗೆ 773 ಕೋಟಿ ರು. ಮೊತ್ತದ ಪ್ರಯೋಜನ ಪಡೆದಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 3.60 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ ಉಚಿತ ಅಕ್ಕಿಯ ಜೊತೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ 170 ರು.ನಂತೆ 298 ಕೋಟಿ ರು. ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ. ಯುವನಿಧಿ ಯೋಜನೆಯಡಿ 6273 ವಿದ್ಯಾರ್ಥಿಗಳಿಗೆ 9.50 ಕೋಟಿ ರು. ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯಾದ್ಯಾಂತ ಸುಮಾರು 13,500 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಶಿಕ್ಷಕರ ಆಯ್ಕೆಪಟ್ಟಿಯಲ್ಲಿ 436 ಮಂದಿ ಆಯ್ಕೆಯಾಗಿದ್ದು, ಈಗಾಗಲೇ 398 ಅಭ್ಯರ್ಥಿಗಳು ನೇಮಕಾತಿ ಹೊಂದಿದ್ದಾರೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ 10 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.ಸಹಸ್ರಾರು ಸಂಖ್ಯೆಯ ನವಜಾತ ಶಿಶುಗಳಿಗೆ ಅನುಕೂಲವಾಗುವಂತೆ ಸಿಮ್ಸ್ ಸಹಯೋಗದೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 75 ಲಕ್ಷ ರು. ವೆಚ್ಚದಲ್ಲಿ ಎದೆಹಾಲು ಸಂಗ್ರಹ ಕೇಂದ್ರವನ್ನು ಆರಂಭಿಸಲಾಗಿದೆ. ಸುಮಾರು 600ಕ್ಕೂ ಹೆಚ್ಚಿನ ಮಕ್ಕಳು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದರು.
ಶಾಸಕ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್ , ಜಿಲ್ಲಾ ಪೊಲೀಸ್ ವಷ್ಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಮಹಾನಗರ ಪಾಲಿಕೆ ಆಯಕ್ತ ಕವಿತಾ ಯೋಗಪ್ಪನವರ್ ಮತ್ತಿತರರು ಇದ್ದರು.ಅಲ್ಲಮಪ್ರಭು ಉದ್ಯಾನದಲ್ಲಿ ಸಂವಿಧಾನ ಪೀಠಿಕೆ
ನಗರದ ಮಧ್ಯಭಾಗದಲ್ಲಿ 46 ಎಕರೆ ವಿಶಾಲ ಪ್ರದೇಶದಲ್ಲಿರುವ ಅಲ್ಲಮಪ್ರಭು ಉದ್ಯಾನದ ಅಭಿವೃದ್ಧಿಗೆ ಈಗಾಗಲೇ ಸರ್ಕಾರವು 5 ಕೋಟಿ ರು. ಅನುದಾನವನ್ನು ಬಿಡುಗಡೆಗೊಳಿಸಿದ್ದು, ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಭಾನುವಾರ ನಗರದ ಅಲ್ಲಮಪ್ರಭು ಉದ್ಯಾನದಲ್ಲಿ ಸಂವಿಧಾನ ಪೀಠಿಕೆಯನ್ನು ಅನಾವರಣಗೊಳಿಸಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.ಗಮನ ಸೆಳೆದ ಪೌರ ಕಾರ್ಮಿಕರ ಪಥಸಂಚಲನ
ನಗರದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಜಿಲ್ಲಾ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ 76ನೇ ಗಣರಾಜ್ಯೋತ್ಸದಲ್ಲಿ ಪರೇಡ್ ಕಮಾಂಡರ್ ಕೆ.ಎಸ್. ಪ್ರಶಾಂತ್ ಕನ್ನಡದಲ್ಲಿ ಆದೇಶ ನೀಡಿದರು. 28 ತಂಡಗಳು ಕವಾಯಿತಿನಲ್ಲಿ ಪಾಲ್ಗೊಂಡಿದ್ದವು. ಇದೇ ಮೊದಲ ಬಾರಿಗೆ ಪೌರ ಕಾರ್ಮಿಕರ ವಿಶೇಷ ತುಕಡಿ ಶಿಸ್ತುಬದ್ದ ಪಥ ಸಂಚಲನ ನಡೆಸಿ, ಎಲ್ಲರ ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು ನೃತ್ಯ ರೂಪಕ ಪ್ರದರ್ಶನ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅತ್ಯುತ್ತಮ ಸೇವೆ ಸಲ್ಲಿಸಿದ 11 ಜನ ಸರ್ಕಾರಿ ನೌಕರರನ್ನು ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಶಿಸ್ತುಬದ್ದ ಮತ್ತು ಆರ್ಕಷಕ ಪಥಸಂಚಲನದಲ್ಲಿ ಎನ್ ಸಿ ಸಿ ಬಾಲಕಿಯರು ಪ್ರಥಮ, ಸೇಕ್ರೆಡ್ ಹಾರ್ಟ್ ಶಾಲೆ ದ್ವಿತೀಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೃತೀಯ ಬಹುಮಾನ ಪಡೆದರು.