ಸಾರಾಂಶ
ಉಡುಪಿಯಲ್ಲಿ ಗುರುಪೂರ್ಣಿಮಾ ಮಹೋತ್ಸವ ನಡೆಯಿತು. ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಭಾರತದಲ್ಲಿ ಅನಾದಿಕಾಲದಿಂದಲೂ ಗುರುಶಿಷ್ಯ ಪರಂಪರೆ ನಡೆದು ಬಂದಿದೆ. ಈ ಪರಂಪರೆಯಿಂದಲೇ ನಮ್ಮ ರಾಷ್ಟ್ರವು ಇಂದಿಗೂ ವೈಭವ ಸಂಪನ್ನವಾಗಿದೆ. ಈ ಪರಂಪರೆಯು ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡುವುದರೊಂದಿಗೆ ಸುಸಂಸ್ಕೃತ ಆಚರಣೆಗಳನ್ನೂ ಕಲಿಸಿದೆ. ನಮ್ಮ ಆಚಾರ, ವಿಚಾರ, ಉಡುಪು, ವರ್ತನೆ ಇವೆಲ್ಲವೂ ಸುಸಂಸ್ಕೃತವಾಗಿರಲು ನಾವು ಪ್ರಯತ್ನಿಸಬೇಕಿದೆ ಎಂದು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಹೇಳಿದರು.ಉಡುಪಿಯಲ್ಲಿ ಭಾನುವಾರ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಪ್ರಭು ಶ್ರೀರಾಮರು ಸಹ ತಮ್ಮ ಗುರುಗಳ ಆಶೀರ್ವಾದ ಪಡೆದು ಆದರ್ಶ ರಾಮರಾಜ್ಯದ ಸ್ಥಾಪನೆಯನ್ನು ಮಾಡಿದ್ದರು. ಈಗ ನಾವೂ ಇಂತಹ ಆದರ್ಶ ರಾಜ್ಯದ ಸ್ಥಾಪನೆಗಾಗಿ ಸುಸಂಸ್ಕೃತ ಆಚರಣೆಗಳೊಂದಿಗೆ ಪ್ರತಿದಿನ ಪ್ರಭು ಶ್ರೀರಾಮನಿಗೆ ಪ್ರಾರ್ಥನೆಯನ್ನು ಮಾಡಬೇಕಾಗಿದೆ ಎಂದರು.ಉಡುಪಿಯ ವ್ಯಾಪಾರಿ ರಾಘವೇಂದ್ರ ಆಚಾರ್ಯ ಮಾತನಾಡಿ, ನಮ್ಮ ಸನಾತನ ಧರ್ಮದಲ್ಲಿ ಗುರು ಪೂರ್ಣಿಮೆಗೆ ಬಹಳ ಮಹತ್ವವಿದೆ. ಭಗವಾನ್ ವೇದವ್ಯಾಸರು ಅವತರಿಸಿದ ದಿನವನ್ನೇ ಗುರು ಪೂರ್ಣಿಮೆ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರು.
ಈ ಮಹೋತ್ಸವದಲ್ಲಿ ಕೆಎಂಸಿ ಆಸ್ಪತ್ರೆಯ ಡಾ. ರವಿರಾಜ ಆಚಾರ್ಯ ಮತ್ತು ಉದ್ಯಮಿಗಳಾದ ಗಣೇಶ್ ಕಿಣಿ ಬೆಳ್ವೆ ಗುರುಪೂರ್ಣಿಯೆ ಮಹತ್ವದ ಬಗ್ಗೆ ಮಾತನಾಡಿದರು. 350ಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.