ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಾರತ ಸ್ವಾತಂತ್ರ್ಯ ನಂತರ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಸಾವಿರಾರು ಮಂದಿ ಹೋರಾಟದ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ. ಹಿರಿಯರ ತ್ಯಾಗ ಬಲಿದಾನಗಳ ಸಂಕೇತವೇ ಸ್ವಾತಂತ್ರ್ಯವಾಗಿದೆ ಎಂದರು.
ತಾಲೂಕಿನಲ್ಲಿ ಹೊಸಹೊಳಲು ಗೋವಿಂದೇಗೌಡ, ಗೋವಿಂದಶೆಟ್ಟರು, ಬಳ್ಳೇಕೆರೆ ಪುಟ್ಟಸ್ವಾಮೀಗೌಡ, ಶೀಳನೆರೆ ಕೆ.ಎಸ್.ಬೋರೇಗೌಡ, ಮಡುವಿನಕೋಡಿ ಹಾಲೇಗೌಡ, ಸಿದ್ದೇಗೌಡ, ಕಿಕ್ಕೇರಿಯ ನರಸೇಗೌಡ, ಬಿದರಹಳ್ಳಿ ಶಿವರಾಮಯ್ಯ ಸೇರಿದಂತೆ ಹಲವು ಗ್ರಾಮಗಳ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಸ್ಮರಿಸಿದರು.ಹಿರಿಯರು ತೋರಿದ ಹಾದಿಯಲ್ಲಿ ನಾವೆಲ್ಲರೂ ಸಾಗಿ ಬಲಿಷ್ಠ ದೇಶ ಕಟ್ಟಲು ತೊಡಗೋಣ. ದೇಶ ಕಾಯುವ ಸೈನಿಕರು, ಅನ್ನ ಕೊಡುವ ರೈತರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳೋಣ ಎಂದು ಕರೆ ನೀಡಿದರು.
ಧ್ವಜಾರೋಹಣ ಮಾಡಿದ ತಹಸೀಲ್ದಾರ್ ಆದರ್ಶ ಮಾತನಾಡಿ, ಬಲಿಷ್ಠ ಭಾರತ ನಿರ್ಮಿಸಲು ನಾವೆಲ್ಲರೂ ಶ್ರಮಿಸೋಣ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ತಳಪಾಯದ ಮೇಲೆ ಭಾರತ ಇಂದು ವಿಶ್ವದ ಬಲಿಷ್ಠ ರಾಷ್ಟ್ರ ಶಕ್ತಿಯಾಗಿ ಬೆಳೆಯುತ್ತಿದೆ. ನಮ್ಮನ್ನು ನೋಡುವ ಜಗತ್ತಿನ ದೃಷ್ಟಿ ಬದಲಾಗಿದೆ ಎಂದರು.
ಇದಕ್ಕೂ ಮುನ್ನ ಮಡುವಿನಕೋಡಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹಾಲೇಗೌಡ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಅವರ ಮನೆಯಲ್ಲಿಯೇ ಗೌರವಿಸಲಾಯಿತು. ಸಾವಿರಾರು ವಿದ್ಯಾರ್ಥಿಗಳೊಂದಿಗೆ ಶಾಸಕ ಮಂಜು ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳು ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಕ್ರೀಡಾಂಗಣವನ್ನು ತಲುಪಿದರು.ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೆಪಿಎಸ್ ಶಾಲೆ ಶಿಕ್ಷಕ ಗುರುಲಿಂಗೇಗೌಡ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಸುಷ್ಮ, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎಚ್.ಕೆ.ಅಶೋಕ್, ಪುರಸಭಾ ಮುಖ್ಯಾಧಿಕಾರಿ ರಾಜು, ಸದಸ್ಯರಾದ ಗಿರೀಶ್, ತಿಮ್ಮೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಸಿಡಿಪಿಒ ಅರುಣ್‌ಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ಆರೋಗ್ಯಾಧಿಕಾರಿ ಡಾ.ಅಜಿತ್, ನಯನಜ ಕ್ಷತ್ರಿಯ ಸಮಾಜದ ಅಧ್ಯಕ್ಷ ಶಿವಪ್ಪ, ಜಯಕರ್ನಾಟಕ ಸಂಘಟನೆಯ ಸೋಮಶೇಖರ್, ಬಿಇಓ ಸೀತಾರಾಮು, ಎಡಿಎಡಿ ಯತೀಶ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಬಿಸಿಎಂ ವೆಂಕಟೇಶ್, ಬಸ್ತಿರಂಗಪ್ಪ, ಎಡಿಎಲ್‌ಆರ್ ಸಿದ್ದಯ್ಯ, ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.