ಧಾರ್ಮಿಕ ಆಚರಣೆ, ಸಂಸ್ಕೃತಿ-ಸಂಸ್ಕಾರಕ್ಕೆ ಭಾರತ ಹೆಸರುವಾಸಿ

| Published : Oct 11 2024, 11:52 PM IST

ಧಾರ್ಮಿಕ ಆಚರಣೆ, ಸಂಸ್ಕೃತಿ-ಸಂಸ್ಕಾರಕ್ಕೆ ಭಾರತ ಹೆಸರುವಾಸಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತಃ ದೇವತೆಗಳೇ ಬಂದು ನೆಲೆಸುತ್ತಾರೆ

ಶಿರಹಟ್ಟಿ: ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ಪರಂಪರೆ-ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ- ಸಂಸ್ಕಾರಕ್ಕೆ ಹೆಸರುವಾಸಿಯಾದ ದೇಶ ನಮ್ಮದು. ವಿವಿಧೆತೆಯಲ್ಲಿ ಏಕತೆ ಎಂಬುದನ್ನು ತೋರಿಸಿಕೊಟ್ಟ ನಮ್ಮ ದೇಶದಲ್ಲಿ ನಾವೆಲ್ಲರೂ ಒಂದು ಎಂಬ ಸದ್ಭಾವದಿಂದ ಬದುಕುತ್ತಿದ್ದೇವೆ ಎಂದು ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ರತ್ನಾ ಬದಿ ಹೇಳಿದರು.

ನವರಾತ್ರಿ ಉತ್ಸವದ ಅಂಗವಾಗಿ ಸ್ಥಳೀಯ ಫಕೀರೇಶ್ವರ ನಗರದ ಬನ್ನಿ ಮಹಾಂಕಾಳಿದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪರಸ್ಪರ ಸಹೋದರತೆ-ಭ್ರಾತೃತ್ವದೊಂದಿಗೆ ಒಂದೆಡೆ ಎಲ್ಲ ಧರ್ಮಿಯರು ಶಾಂತಿಯುತ ಜೀವನ ನಡೆಸಲು ಆಶ್ರಯ ನೀಡಿದ ಪವಿತ್ರ ದೇಶ ನಮ್ಮದಾಗಿದೆ.

ಯತ್ರ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾ ಎಂಬ ಸಂಸ್ಕೃತ ಶ್ಲೋಕದಂತೆ ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತಃ ದೇವತೆಗಳೇ ಬಂದು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ.

ಅದಕ್ಕಾಗಿ ನಮ್ಮ ತಾಯಂದಿರು ಸನಾತನವಾಗಿ ಅಚರಿಸುತ್ತಾ ಬಂದಿರುವ ಈ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಮಕ್ಕಳಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಂಪ್ರದಾಯಿಕ-ಸಂಸ್ಕಾರ ಒಡಮೂಡುವಂತೆ ಮಾಡುವುದು ಅಗತ್ಯವಾಗಿದೆ. ಈ ಮೂಲಕ ತಾಯಂದಿರು ಇಂತಹ ಸಂಪ್ರದಾಯ, ಆಚಾರ-ವಿಚಾರ ಮುಂದಿನ ಪೀಳಿಗೆಗೆ ಬಳವಳಿಯಾಗಿ ನೀಡಲು ಸಾಧ್ಯ ಎಂದು ಹೇಳಿದರು.

ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ದುರ್ಗಾದೇವಿಯು ಒಂಬತ್ತು ದಿನಗಳ ವರೆಗೆ ಶಕ್ತಿಯ ಆರಾಧನೆ ಮಾಡುವ ಮತ್ತು ದೇವಿಯು ಜಗತ್ತಿನಲ್ಲಿ ದುಷ್ಟರ ಸಂಹಾರ ಮಾಡಿ ಶಿಷ್ಟರ ರಕ್ಷಣೆಗಾಗಿ ನವಶಕ್ತಿ ಅವತಾರ ತಾಳುತ್ತಾಳೆ ಎಂಬ ಪ್ರತೀತಿ ಇದೆ. ಈ ಹಬ್ಬದ ಪ್ರಯುಕ್ತ ಸುಮಂಗಲೆಯರು ಪ್ರತಿ ಮನೆಯಲ್ಲೂ ಒಂಬತ್ತು ದಿನಗಳ ಪರ್ಯಂತ ದೀಪ ಹಾಕುವುದು, ಘಟಸ್ಥಾಪನೆ ಮಾಡುವುದು ಹೀಗೆ ಆದಿಶಕ್ತಿ ಆರಾಧಿಸುವ ಪವಿತ್ರ ಮತ್ತು ವಿಶಿಷ್ಟವಾದ ಹಬ್ಬ ಇದಾಗಿದೆ ಎಂದರು.

ಬನ್ನಿಮರದ ಕಟ್ಟಿಯ ಆವರಣದಲ್ಲಿ ಮಹಾಂಕಾಳಿದೇವಿಯನ್ನು ಪ್ರತಿಷ್ಠಾಪಿಸಿ ದೇವಿಯ ಮುಂದೆ ತಳಿರು, ತೋರಣ, ಬಾಳೆ ಕಂಬಗಳಿಂದ ಅಲಂಕೃತಗೊಳಿಸಲಾಯಿತು. ಮಂಟಪದಲ್ಲಿ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ವಿಶೇಷವಾಗಿ ಮಕ್ಕಳ ಫಲಾಪೇಕ್ಷೆ ಉಳ್ಳವರು, ಮದುವೆ ಅಪೇಕ್ಷಿತ ಸಹೋದರಿಯರು, ನಾನಾ ಸ್ವಯಂ ಸಂಕಲ್ಪಗಳೊಂದಿಗೆ ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿತು. ಅಕ್ಕಿ,ಕಣ, ಎಲೆ,ಅಡಿಕೆ, ಹಸಿರು ಬಳೆ ಸೇರಿದಂತೆ ಮಂಗಲ ದ್ರವ್ಯಗಳನ್ನು ಅರ್ಪಿಸಿದರು. ಉಡಿ ತುಂಬಿಸಿಕೊಳ್ಳಲು ಭಕ್ತಿ ಭಾವದಿಂದ ಎಲ್ಲ ತಾಯಂದಿರು ಸಾಲು ಸಾಲಾಗಿ ನಿಂತಿದ್ದರು.