ಭಾರತ ಕೈಗಾರಿಕಾ, ಆರ್ಥಿಕ ಕ್ರಾಂತಿಯಲ್ಲಿ ಪ್ರಗತಿ

| Published : Aug 16 2024, 12:50 AM IST

ಸಾರಾಂಶ

ಇನ್ನೂರು ವರ್ಷಗಳ ಕಾಲ ನಮ್ಮ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಹೊಂದಲು ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಕನಕಪುರ

ಇನ್ನೂರು ವರ್ಷಗಳ ಕಾಲ ನಮ್ಮ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಹೊಂದಲು ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ. ಎನ್. ಮಂಜುನಾಥ್ ತಿಳಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ಅಹಿಂಸಾ ಹೋರಾಟ ಮತ್ತು ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯನ್ನು ಹೂಡಿದ್ದರು. ಸ್ವಾತಂತ್ರ್ಯಕ್ಕಾಗಿ ಪಂಡಿತ್ ಜವಹರಲಾಲ್ ನೆಹರು, ಸರ್ದಾರ್ ವಲ್ಲಭ ಬಾಯ್ ಪಟೇಲ್, ಲಾಲಾ ಲಜಪತರಾಯ್, ಹೀಗೆ ಲಕ್ಷಾಂತರ ಹೋರಾಟಗಾರರನ್ನು ನಾವು ನಿರಂತರವಾಗಿ ಸ್ಮರಿಸಬೇಕು ಎಂದರು.

ಭಾರತ ಹಸಿರು ಕ್ರಾಂತಿ, ಕೈಗಾರಿಕಾ, ಆರ್ಥಿಕ ಕ್ರಾಂತಿಯಲ್ಲಿ ಪ್ರಗತಿ ಕಾಣುತ್ತಿದೆ. ದೇಶದಲ್ಲಿ ಶೈಕ್ಷಣಿಕ ಕ್ರಾಂತಿ, ಆರೋಗ್ಯ ಕ್ರಾಂತಿ ಆಗಬೇಕಿದೆ. ಶಿಕ್ಷಣ ಮತ್ತು ಆರೋಗ್ಯ ದೇಶದ ಅಭಿವೃದ್ಧಿಯ ಎರಡು ಕಣ್ಣುಗಳು. ದೇಶದ ಜನತೆಗೆ ಶಿಕ್ಷಣ ಮತ್ತು ಆರೋಗ್ಯವು ಜನರ ಕೈಗೆಟುಕುವಂತಾಗಬೇಕೇ ಹೊರತು ವ್ಯಾಪಾರೀಕರಣವಾಗಬಾರದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸರ್ಕಾರ ಬೆಂಬಲವಾಗಿ ನಿಂತಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಮಾಜಿ ಸಂಸದ ಡಿ. ಕೆ. ಸುರೇಶ್ ನಮ್ಮ ಕ್ಷೇತ್ರಕ್ಕೆ ಹತ್ತಾರು ಯೋಜನೆ ತಂದು ಅಭಿವೃದ್ಧಿ ಮಾಡಿದ್ದಾರೆ. ಹಾಲಿ ಸಂಸದ ಸಿ. ಎನ್‌. ಮಂಜುನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದರು.

ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಪತ್ರಕರ್ತರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಡಾ. ಸ್ಮಿತಾ ರಾಮು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಡಿ. ವಿಜಯ್ ದೇವ್, ತಾಪಂ ವಿಸ್ತರಣಾ ಅಧಿಕಾರಿ ಭೈರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್ ಕೃಷ್ಣ ಮೂರ್ತಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ದಿಲೀಪ್, ಕೆ.ಟಿ.ಸಿ.ಎಂ.ಎಸ್ ಚಂದ್ರು,ನಗರಸಭಾ ಆಯುಕ್ತ ಮಹದೇವ್, ಮಾಜಿ ನಗರಸಭಾ ಅಧ್ಯಕ್ಷ ಕೆ ಟಿ ಕಿರಣ್, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು ಭಾಗವಹಿಸಿದ್ದರು.