ಕನ್ನಡಪ್ರಭವಾರ್ತೆ ಚಿತ್ರದುರ್ಗ

ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಮಂಡನೆಗೆ ಸೋಲುಂಟಾಗಲು ಕಾಂಗ್ರೇಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವೇ ಕಾರಣ ಎಂದು ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು 16, 17, 18ರಂದು ದೇಶದ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ಬಹಳಷ್ಟು ಪ್ರಯತ್ನಿಸಿದರು. ಆದರೆ, ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುವ ಮೂಲಕ ಮಹಿಳಾ ವಿರೋಧಿ ಎಂಬುದನ್ನು ಸಾಬೀತು ಪಡಿಸಿದೆ ಎಂದರು.

ಮಹಿಳಾ ಮೀಸಲು ವಿಚಾರದಲ್ಲಿ 900 ವರ್ಷಗಳಿಂದಲೂ ಸೋಲನ್ನು ಕಂಡಿದ್ದೇವೆ. ಬಸವಣ್ಣನ ಕಾಲಘಟ್ಟದಲ್ಲೂ ಕೂಡ ಮಹಿಳೆಯರ ವಿಚಾರದಲ್ಲಿ ಇಂತಹುದೇ ಸೋಲುಗಳು ಆಗಿದ್ದವು. ಪುರುಷ ಪ್ರಧಾನ ಸಮಾಜದಲ್ಲಿ ಇದೊಂದು ಕಹಿ ಘಟನೆಯಾಗಿದೆ. ಪ್ರಧಾನಿ ಮೋದಿ ಅವರಿಗೆ ಮಹಿಳೆಯರ ಮೀಸಲಾತಿ ಜಾರಿಗೊಳಿಸುವ ಕುರಿತು ತುಂಬಾ ಆಸೆ ಇತ್ತು ಎಂದು ಹೇಳಿದರು.

ಕ್ಷೇತ್ರ ಮರುವಿಂಗಡಣೆ ವಿಷಯದಲ್ಲೂ ಕಾಂಗ್ರೆಸ್ ತರ್ಕವಿಲ್ಲದ ಆರೋಪಗಳನ್ನು ಮಾಡುತ್ತಿದೆ. ಲೋಕಸಭಾ ಕ್ಷೇತ್ರಗಳು ಹೆಚ್ಚಾಗುವುದನ್ನು ತಡೆದು ಸಂಭ್ರಮಿಸುತ್ತಿರುವ ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ. ಈತನಿಗೆ ಸರಿಯಾದ ರಾಜಕೀಯ ನಿಲುವುಗಳು ಇಲ್ಲ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಈ ವಿಷಯದಲ್ಲಿ ರಾಹುಲ್ ಹಾಗೂ ಗಾಂಧಿ ಮನೆತನದವರ ಮಾತುಗಳನ್ನು ಕೇಳಿ ದೂರದೃಷ್ಟಿ ಇಲ್ಲದ ನಾಯಕನಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದುರಾಡಳಿತ ಮಾಡುತ್ತಿದೆ. ಇದನ್ನು ಜನರು ಖಂಡಿಸಬೇಕು ಎಂದರು.


ಗಾಂಧಿ ಕುಟುಂಬಕ್ಕೆ ವ್ಯತ್ಯಾಸಗಳು ಗೊತ್ತಿಲ್ಲ. ವಂಶಪಾರಂಪರ್ಯವಾಗಿ 65 ವರ್ಷಳಿಗೂ ಅಧಿಕ ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಜಾರಿಗೆ ತಂದ ಯೋಜನೆಗಳ ಬಗ್ಗೆ ಹೇಳಲಿ. ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಇಡೀ ದೇಶದಲ್ಲಿ ಮಹಿಳೆಯರು ಹೋರಾಡಬೇಕಿದೆ. ಕನಿಷ್ಠ ಮಹಿಳೆಯರ ಆತ್ಮಗೌರವಕ್ಕೂ ಕಾಂಗ್ರೆಸ್ ಬೆಲೆ ನೀಡಿಲ್ಲ. ಮಹಿಳೆಯರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳು ಇರಲಿಲ್ಲ. 65 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಯವರು 12ಕೋಟಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. 15 ಕೋಟಿ ಜನರಿಗೆ ಕುಡಿಯುವ ನೀರಿಗಾಗಿ ಯೋಜನೆ ಜಾರಿ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ಎಷ್ಟು ಮಂದಿ ಮಹಿಳೆಯರಿಗೆ ದೇಶದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿ ಮಾಡಿದ್ದಾರೆ. ಬಿಜಿಪಿ ಈ ವಿಷಯದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚು ಅವಕಾಶ ನೀಡಿದೆ. ಬಾಬಾ ಸಾಹೇಬರ ಸಂವಿಧಾನ ದೇಶದ ಕಾಶ್ಮೀರದಲ್ಲಿ ಜಾರಿ ಇರಲೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 370 ರದ್ದು ಮಾಡಿದ ಮೇಲೆ ಬಾಬಾ ಸಾಹೇಬರ ಸಂವಿಧಾನ ಜಾರಿಯಾಗಿದೆ ಎಂದರು.

ಕಾಂಗ್ರೆಸ್ ಸುಳ್ಳಿನ ಮೇಲೆ ರಾಜಕಾರಣ ಮಾಡಲು ಬರುತ್ತಿದೆ. ಆಪರೇಷನ್ ಸಿಂಧೂರ, ಸರ್ಜಿಕಲ್ ಸ್ಟ್ರೈಕ್ ಸುಳ್ಳೆಂದರು. ಈಗ ಎರಡೂ ಮಹತ್ವದ ವಿಧೇಯಕಗಳಿಗೆ ಸೋಲಾಗಿರಬಹುದು. ಮುಂದಿನ ದಿನಗಳಲ್ಲಿ ಮೋದಿಯವರು ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕ ಜಾರಿಗೊಳಿಸಿ ಬದ್ಧತೆ ಮೆರೆಯಲಿದ್ದಾರೆ ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಹೊಸದುರ್ಗದ ಎಸ್.ಲಿಂಗಮೂರ್ತಿ, ಸೂರನಹಳ್ಳಿ ಶ್ರೀನಿವಾಸ್, ಬಾಳೆಕಾಯಿ ರಾಮದಾಸ್,ಶ್ಯಾಮಲಾ, ಬಿಜೆಪಿ ಮಾಜಿ ಅಧ್ಯಕ್ಷ ಮುರಳಿ, ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ. ಮಂಜುನಾಥ್, ಡಾ.ಸಿದ್ದಾರ್ಥ್ ಇದ್ದರು.