ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಭಾನುವಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ನಗರಕ್ಕೆ ಆಗಮಿಸಿದಾಗ ನೂರಾರು ಬಿಜೆಪಿ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಪಕ್ಷದ ಬಾವುಟ ಪ್ರದರ್ಶಿಸಿ, ಮೋದಿ ಪರ ಘೋಷಣೆ ಕೂಗುತ್ತಾ ಸಡಗರದಿಂದ ರೈಲನ್ನು ಸ್ವಾಗತಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜು, ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಮಾಜಿ ಶಾಸಕ ಎಚ್.ನಿಂಗಪ್ಪ ಅವರೊಂದಿಗೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಬಿ.ಸುರೇಶ್‌ಗೌಡರು ಇದೇ ವಂದೇ ಭಾರತ್ ರೈಲಿನಲ್ಲಿ ಬಂದಿಳಿದು ಸಂಭ್ರಮದಲ್ಲಿ ಭಾಗಿಯಾದರು.
ಇದರ ಅಂಗವಾಗಿ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿತ್ವ, ದಿಟ್ಟ ನಾಯಕತ್ವದಿಂದ ಇಂದು ಭಾರತವು ವಿಶ್ವ ಭೂಪಟದಲ್ಲಿ ಮಿಂಚುತ್ತಿದೆ. ಹಿಂದಿನ ರೈಲ್ವೆ ವ್ಯವಸ್ಥೆಗೂ ಈ 10 ವರ್ಷಗಳಿಂದ ಆಗಿರುವ ಬದಲಾವಣೆಗೂ ಬಹಳಷ್ಟು ವ್ಯತ್ಯಾಸವಿದೆ. ಇಂದು ರೈಲ್ವೆ ಸೇವೆ ಹೆಚ್ಚು ಸುಸಜ್ಜಿತ, ಸುರಕ್ಷಿತವಾಗಿದೆ. ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅತ್ಯಾಧುನಿಕವಾಗಿ ನಿರ್ಮಾಣವಾಗುತ್ತಿವೆ. ಪ್ರಯಾಣಿಕರಿಗೆ ಹೆಚ್ಚು ಸೇವೆಗಳನ್ನು ಒದಗಿಸಲಾಗುತ್ತಿದೆ. ಪ್ರಧಾನಿ ಮೋದಿ ,ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಾರಣದಿಂದ ಇಂದು ರೈಲ್ವೆಯಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತಿದ್ದೇವೆ ಎಂದು ಹೇಳಿದರು.ತುಮಕೂರು ನಿಲ್ದಾಣದಲ್ಲಿ ಎರಡು ವಂದೇ ಭಾರತ ರೈಲು ನಿಲುಗಡೆ ಅವಕಾಶ ಸಿಕ್ಕಿದೆ. ಸಚಿವ ವಿ.ಸೋಮಣ್ಣ ಅವರು ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಿಂದ ಹಲವಾರು ಯೋಜನೆಗಳನ್ನು ತಂದಿದ್ದಾರೆ. ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರಿಡಬೇಕೆಂದು ಸಚಿವ ಸೋಮಣ್ಣನವರ ಆಶಯ ಈಡೇರುತ್ತಿದೆ. ಸರ್ಕಾರವೂ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಹಲವಾರು ಕಡೆ ರೈಲ್ವೆ ಮೇಲು ಸೇತುವೆ, ಕೆಳ ಸೇತುವೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ ಶಾಸಕ ಜ್ಯೋತಿಗಣೇಶ್ ಅವರು ಮೋದಿ ಸರ್ಕಾರ ಹಾಗೂ ಸಚಿವರನ್ನು ಅಭಿನಂದಿಸಿದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಬಹಳ ವರ್ಷಗಳ ಕನಸನ್ನು ಮೋದಿ ಸರ್ಕಾರ ನನಸು ಮಾಡುತ್ತಿದೆ. ಹತ್ತು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಕೈಗಾರಿಕೆ, ಹೆದ್ದಾರಿಗಳ ಅಭಿವೃದ್ಧಿ, ರೈಲ್ವೆಯಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದಾಗಿದೆ ಎಂದರು.ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, 50 ವರ್ಷಗಳಿಂದ ತಾವು ರೈಲು ಪ್ರಯಾಣ ಮಾಡುತ್ತಿದ್ದು, ಈ ಹತ್ತು ವರ್ಷಗಳಲ್ಲಿ ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಬದಲಾವಣೆಗಳಾಗಿವೆ. ಇದಕ್ಕೆಲ್ಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪಶಕ್ತಿ, ಅವರಲ್ಲಿನ ಅದಮ್ಯಚೈತನ್ಯ ಹಾಗೂ ಬದ್ಧತೆ ಕಾರಣ ಎಂದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ವೈ.ಎಚ್.ಹುಚ್ಚಯ್ಯ, ಎಸ್.ಪಿ.ಚಿದಾನಂದ್, ಎಸ್.ಶಿವಪ್ರಸಾದ್, ನೈರುತ್ಯ ರೈಲ್ವೆ ವಿಭಾಗದ ಬೆಂಗಳೂರು ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾದ ಟಿ.ಜೆ.ಗಿರೀಶ್, ಕರಣಂ ರಮೇಶ್, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಸೇರಿದಂತೆ ರೈಲ್ವೆ ಇಲಾಖೆ ವಿವಿಧ ಅಧಿಕಾರಿಗಳು, ಬಿಜೆಪಿ ಮುಖಂಡರು ಭಾಗವಹಿಸಿದ್ದರು.