ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತವು ಇಡೀ ಜಗತ್ತಿಗೆ ಅಧ್ಯಾತ್ಮದ ಮಾರ್ಗ ತೋರುವ ತಾಯಿ ಎಂದು ಮ್ಯಾಕ್ಸ್‌ಮುಲ್ಲರ್ ಹೇಳಿದ್ದರು. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್ ಸಹ ಉಪನಿಷತ್ ಮತ್ತು ಭಗವದ್ಗೀತೆಯನ್ನು ಒಪ್ಪಿಕೊಂಡಿದ್ದರು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬದ 100 ದಿನಗಳ ಜಾಗತಿಕ ಸಾಂಸ್ಕೃತಿಕ ಉತ್ಸವ’ದಲ್ಲಿ ಜರ್ಮನಿ ಮತ್ತು ಭಾರತದ ಒಡನಾಟವನ್ನು ಮೆಲುಕು ಹಾಕುತ್ತಾ, ಭಾರತದೊಂದಿಗೆ ಜರ್ಮನಿ ಹೊಂದಿರುವ ಅಧ್ಯಾತ್ಮಿಕ ಸಂಬಂಧದ ಕುರಿತು ಆಶೀರ್ವಚನದಲ್ಲಿ ವಿವರಿಸಿದರು.
ಜರ್ಮನಿ ಶಾಲೆಗಳಲ್ಲಿ ಸಂಸ್ಕೃತಜರ್ಮನಿಯ ಮ್ಯಾಕ್ಸ್‌ಮುಲ್ಲರ್ ಭಾರತಕ್ಕೆ ಬಂದು ವೇದಾಭ್ಯಾಸ ಮಾಡಿದ್ದರು. ಭಾರತ ಬದುಕಿದರೆ ಯಾರು ಸಾಯುತ್ತಾರೆ, ಭಾರತ ಸತ್ತರೆ ಯಾರು ಬದುಕುತ್ತಾರೆ ಎಂದು ನೇರವಾಗಿ ಪ್ರಶ್ನಿಸಿದ್ದರು. ಜರ್ಮನಿ ಮತ್ತು ಭಾರತಗಳು ಭೌಗೋಳಿಕವಾಗಿ ದೂರ ಇರಬಹುದು. ಆದರೆ ಅಲ್ಲಿರುವ ಎಷ್ಟೋ ಜನರಿಗೆ ಉಪನಿಷತ್, ಭಗವದ್ಗೀತೆಯ ಬಗ್ಗೆ ಭಾರತೀಯರಿಗಿಂತಲೂ ಹೆಚ್ಚು ತಿಳಿದಿದೆ. ಜರ್ಮನಿಯ ಹಲವು ಶಾಲೆಗಳಲ್ಲಿ ಸಂಸ್ಕೃತ ಕಡ್ಡಾಯವಾಗಿದೆ ಎಂದು ವಿವರಿಸಿದರು.
ಸತ್ಯ ಸಾಯಿ ಗ್ರಾಮವೇ ಸ್ವರ್ಗವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸತ್ಯ ಸಾಯಿ ಸಂಸ್ಥೆಯು ಅತಿ ಬಡವರಿಗಾಗಿ ಕೆಲಸ ಮಾಡುತ್ತಿದೆ. ಸ್ವರ್ಗ ಎಲ್ಲಿದೆ ಅಂತ ಹುಡುಕುತ್ತಿದ್ದೆ. ಇಂದು ಆ ಸ್ಥಳ ಸಿಕ್ಕಿದೆ. ಭಾರತೀಯ ಸಂಸ್ಕೃತಿಯ ಸುಂದರವಾದ ಕ್ಯಾಂಪಸ್ ನೋಡಲು ಖುಷಿಯಾಗುತ್ತದೆ. ಇಂದು ಆಹಾರ ಮತ್ತು ಶಿಕ್ಷಣ ಮಾರುಕಟ್ಟೆಯಾಗಿದೆ. ಸತ್ಯ ಸಾಯಿ ಸಂಸ್ಥೆಯು ಸಮಾಜದಲ್ಲಿನ ಬಡವರಿಗೆ ಇವೆಲ್ಲವನ್ನೂ ಉಚಿತವಾಗಿ ನೀಡುತ್ತಿದೆ ಎಂದು ಶ್ಲಾಘಿಸಿದರು.
ಜರ್ಮನಿಯ ಸೂಫಿ ಗುರು ಶೇಖ್ ಬುರ್ಹಾನುದ್ದೀನ್ ಹೆರ್ರಾಮನ್ ಮಾತನಾಡಿ, ಬೇಷರತ್ ಪ್ರೀತಿ ಎಂದರೇನು ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಸರ್ವರೂ ಸರ್ವರಿಗೂ ಕೊಡಬೇಕು ಎಂದು ಸಲಹೆ ಮಾಡಿದರು.ಇದೇ ವೇಳೆ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಕ್ಷೇತ್ರದಲ್ಲಿ ಸಹಕಾರ ನೀಡುತ್ತಿರುವ ಕ್ರೋನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್- 2025’ ಪುರಸ್ಕಾರ ಹಾಗೂ ಜರ್ಮನಿಯ ಊಟೆ ಸ್ಕ್ನೆಬೆಲ್ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪ್ರಶಸ್ತಿ 2025’ ನೀಡಿ ಗೌರವಿಸಲಾಯಿತು.