ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವದಲ್ಲಿ ಮೂಲ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಏಕೈಕ ರಾಷ್ಟ್ರವೆಂದರೆ ಭಾರತ ಎಂದು ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಅವರು ಹೇಳಿದರು.ಕಾವೇರಿ ನಗರದಲ್ಲಿ ಐದನೇ ವರ್ಷದ ಗೋ-ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಪ್ರಕೃತಿಯಿಂದ ಉದ್ಭವವಾಗಿರುವ ವೇದ-ಉಪನಿಷತ್ತುಗಳನ್ನು ಅನುಸರಿಸುವಂತಹ ಸಾಮರ್ಥ್ಯ ಹೊಂದಿದ್ದರು. ವೇದಗಳ ಮೂಲಕ ದೇಶಕ್ಕೆ ಪರಂಪರೆಯನ್ನು ಸೃಷ್ಟಿಸಿಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಧರ್ಮ ಪರಂಪರೆ ಹರಿದುಬಂದಿದೆ ಎಂದರು.
ವಿಶ್ವದ ಯಾವ ದೇಶಕ್ಕೂ ಇಂತಹ ಪಾರಂಪರಿಕ ಹಿನ್ನೆಲೆ ಇಲ್ಲ. ಬೇರೆ ಬೇರೆ ಕಾರಣಗಳಿಂದ ಮೂಲ ಪರಂಪರೆ ಯಾವ ದೇಶದಲ್ಲೂ ಉಳಿದಿಲ್ಲ. ಮೂಲ ಪರಂಪರೆ ಎನ್ನುವುದು ಭಾರತದಲ್ಲಷ್ಟೇ ಉಳಿದುಕೊಂಡಿದೆ. ಮಂಡ್ಯದಲ್ಲೂ ಪ್ರಾಚೀನ ಪರಂಪರೆ ಇದೆ. ಶ್ರೀರಂಗಪಟ್ಟಣಕ್ಕೆ ಗೌತಮ ಋಷಿಗಳು ಬಂದು ಅಲ್ಲಿ ತಪಸ್ಸು ಮಾಡಿ ಶ್ರೀರಂಗನಾಥ ಸ್ವಾಮಿಯನ್ನು ಸೃಷ್ಟಿ ಮಾಡಿದರು. ನಂತರ ಅನೇಕ ಆಚಾರ್ಯರು ಮಂಡ್ಯಕ್ಕೆ ಬಂದು ದೇವಸ್ಥಾನಗಳನ್ನು ನಿರ್ಮಾಣ ಈ ಮಣ್ಣಿನ ಪಾವಿತ್ರ್ಯತೆಯನ್ನು ಹೆಚ್ಚಿಸಿದರು. ಇಂತಹ ನೆಲದಲ್ಲಿ ಹುಟ್ಟಿರುವ ನಾವು ಪುಣ್ಯವಂತರು ಎಂದು ನುಡಿದರು.ಮೂಲ ಪರಂಪರೆಯನ್ನು ಉಳಿಸಿಕೊಂಡಿರುವುದರಿಂದಲೇ ಭಾರತ ವಿಶ್ವ ಮಟ್ಟದಲ್ಲಿ ಪ್ರಾಧಾನ್ಯತೆ ಪಡೆದುಕೊಂಡಿದೆ. ನಮ್ಮ ಧರ್ಮದಲ್ಲಿರುವ ತತ್ವಶಾಸ್ತ್ರವನ್ನು ಎಲ್ಲರೂ ಮೆಚ್ಚಿದ್ದಾರೆ. ಅದನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ದೇಶದಲ್ಲಿ ಧರ್ಮ ಉಳಿದಿರುವುದರಿಂದಲೇ ನಾವು ಬದುಕಲು ಸಾಧ್ಯವಾಗಿದೆ ಎಂದರು.
ಪ್ರಧಾನಿ ಮೋದಿ ಅವರು ವೈವಿಧ್ಯಮಯ ಪರಂಪರೆ ಆಧಾರದ ಮೇಲೆ ವಿಕಸಿತ ಭಾರತ ನಿರ್ಮಾಣ ಮಾಡುವ ಕನಸು ಕಂಡಿದ್ದಾರೆ. ಅದನ್ನು ನನಸು ಮಾಡಲು ನಾವೆಲ್ಲರೂ ಕೈಜೋಡಿಸಬೇಕಿದೆ. ಆಧುನಿಕ ಕಾಲಕ್ಕೆ ನವೀನ ಅಭಿವೃದ್ಧಿ ಕೆಲಸಗಳು, ಹೊಸ ಯೋಜನೆ, ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಜನರ ಬದುಕನ್ನು ಉತ್ತಮಪಡಿಸಬೇಕಿದೆ. ಆ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸಲು ಮುಂದುವರೆಯುತ್ತಿದ್ದೇವೆ ಎಂದರು.ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ರೈತರು ದುಡಿಮೆಯನ್ನು ಮಾಡಿ ಮುಗಿಸಿ ದವಸ-ಧಾನ್ಯಗಳನ್ನು ಮನೆಗೆ ಸೇರಿಸುವ ಕಾಲವೇ ಸುಗ್ಗಿಕಾಲ. ನಮ್ಮ ಪೂರ್ವಿಕರು ಆಧುನೀಕತೆ ಇಲ್ಲದಿರುವ ಕಾಲದಲ್ಲೇ ಹಬ್ಬಗಳಿಗೆ ವೈಶಿಷ್ಟ್ಯತೆಯನ್ನು ತುಂಬಿದರು. ಮನುಷ್ಯನ ಆರೋಗ್ಯ ಮತ್ತು ವಾತಾವರಣಕ್ಕೆ ತಕ್ಕಂತೆ ಯಾವ ಹಬ್ಬಗಳನ್ನು ಹೇಗೆ ಆಚರಿಸಬೇಕೆಂಬುದನ್ನು ನಿರ್ಧಾರ ಮಾಡಿದ್ದರು ಎಂದರು.
ಕಾಲ ಬದಲಾದಂತೆಲ್ಲಾ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿಸಿಕೊಟ್ಟು, ಒಳ್ಳೆಯ ವಾತಾವರಣದಲ್ಲಿ ಉನ್ನತ ಉದ್ಯೋಗ ಸೃಷ್ಟಿಸಿಕೊಡುವ ಧಾವಂತ ಹೆಚ್ಚಾಗಿದೆ. ಅದಕ್ಕಾಗಿ ಹಳ್ಳಿಗಳನ್ನು ಬಿಟ್ಟು ನಗರದಲ್ಲಿ ಶ್ರಮದಿಂದ ನೆಲೆ ಕಲ್ಪಿಸಿಕೊಂಡು ಬದುಕನ್ನು ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಸುಗಳು, ಎತ್ತುಗಳು, ದನ-ಕರುಗಳನ್ನು ಸಾಕುವುದಕ್ಕೆ, ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಹಬ್ಬಗಳನ್ನು ಜೀವಂತವಾಗಿ ಉಳಿಸುವ ಕೆಲಸ ನಿರಂತರವಾಗಿ ಮುಂದುವರೆದುಕೊಂಡು ಬಂದಿದೆ ಎಂದು ನುಡಿದರು..ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಗೋ ಸೇವಾ ಸಮಿತಿ ಅಧ್ಯಕ್ಷ ಹೆಚ್.ಆರ್.ಅಶೋಕ್, ಪುನೀತ್ ಕೆರೆಹಳ್ಳಿ, ಗ್ರಾಪಂ ಅಧ್ಯಕ್ಷೆ ಸುವರ್ಣವತಿ, ಶಿವಲಿಂಗಪ್ಪ, ಅರವಿಂದ್, ಚೇತು ಇತರರಿದ್ದರು.