ಮೋದಿಯಂಥ ಸಮರ್ಥ ನಾಯಕತ್ವ ದೇಶಕ್ಕೆ ಅಗತ್ಯ: ವಿದೇಶಾಂಗ ಸಚಿವ ಜೈಶಂಕರ

| Published : Feb 29 2024, 02:06 AM IST

ಸಾರಾಂಶ

ತಂತ್ರಜ್ಞಾನ ವ್ಯಕ್ತಿಗಳ ಮೇಲಷ್ಟೆ ಅಲ್ಲ. ಕಲೆ, ಸಂಸ್ಕೃತಿ, ಪರಂಪರೆ ಮೇಲೆಯೂ ಪರಿಣಾಮ ಬೀರಲಿದೆ. ಅವುಗಳನ್ನು ಸಹ ನಮ್ಮದೇ ಆದ ನೆಲೆಯಲ್ಲಿ ಉಳಿಸಿಕೊಳ್ಳಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್‌. ಜೈಶಂಕರ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಆಧುನಿಕ ತಂತ್ರಜ್ಞಾನದಿಂದ ಮುಂದಿನ ಐದಾರು ವರ್ಷಗಳಲ್ಲಿ ತುಂಬಾ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬರಲಿದೆ. ಅವುಗಳನ್ನೆಲ್ಲ ಮೆಟ್ಟಿ ನಿಂತು ಎದುರಿಸಬೇಕಾದ ಅನಿವಾರ್ಯತೆ ದೇಶದ ಮುಂದಿದೆ. ಎಷ್ಟೇ ಸಂಕಷ್ಟಗಳು ಬಂದರೂ ಎದುರಿಸಲು ಶಕ್ತಿಯುತ ಸರ್ಕಾರ ಅಗತ್ಯ. ಅದಕ್ಕೆ ಗಟ್ಟಿತನದ ಹಾಗೂ ದಿಟ್ಟ ಪ್ರಧಾನಿ ಬೇಕಾಗುತ್ತದೆ. ಅಂಥ ಗಟ್ಟಿತನ, ಸಮರ್ಥ ನಾಯಕತ್ವ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್‌. ಜೈಶಂಕರ ಹೇಳಿದರು.

ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವ ವಿದ್ಯಾಲಯದ ಪ್ರಾಂಗಣದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಕಳೆದ 10 ವರ್ಷಗಳ ಕಾಲ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಿಕ್ಕಿರಿದು ತುಂಬಿದ್ದ ಸಮಾವೇಶದಲ್ಲಿ ಸರಿಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ, ದೇಶದ ಸ್ಥಿತಿಗತಿ, ದೇಶದಲ್ಲಿ ಆಗುತ್ತಿರುವ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯ, ಆರ್ಥಿಕ ಪರಿಸ್ಥಿತಿ, ದೇಶದ ಸುಭದ್ರತೆ, ರಕ್ಷಣೆ, ತಂತ್ರಜ್ಞಾನದ ಪರಿಣಾಮ, ಅದಕ್ಕೆ ಕಡಿವಾಣ ಹಾಕಲು ಕೈಗೊಂಡಿರುವ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನದಿಂದ ಲಾಭದಷ್ಟೇ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಆರ್ಟಿಫಿಷಿಯಲ್‌ ಇಂಟಿಲಿಜೆನ್ಸ್‌, ಡೀಪ್‌ಫೇಕ್‌ ಇತ್ಯಾದಿ ತಂತ್ರಜ್ಞಾನಗಳು ತುಂಬಾ ಸಂಕಷ್ಟವನ್ನು ತಂದೊಡ್ಡಲಿವೆ. ಇವುಗಳನ್ನೆಲ್ಲ ಮೆಟ್ಟಿನಿಲ್ಲಬೇಕಿದೆ. ಇವುಗಳಿಗೆ ಕಡಿವಾಣ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ತಂತ್ರಜ್ಞಾನ ವ್ಯಕ್ತಿಗಳ ಮೇಲಷ್ಟೆ ಅಲ್ಲ. ಕಲೆ, ಸಂಸ್ಕೃತಿ, ಪರಂಪರೆ ಮೇಲೆಯೂ ಪರಿಣಾಮ ಬೀರಲಿದೆ. ಅವುಗಳನ್ನು ಸಹ ನಮ್ಮದೇ ಆದ ನೆಲೆಯಲ್ಲಿ ಉಳಿಸಿಕೊಳ್ಳಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಾಗತಿಕ ಮಟ್ಟದಲ್ಲಿ ಕೇವಲ ಆರ್ಥಿಕ ಸ್ಪರ್ಧೆ ಮಾತ್ರ ಇಲ್ಲ, ಅದರ ಜತೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆಯನ್ನೂ ಎದುರಿಸಬೇಕಿದೆ. ಇಂತಹ ಎಲ್ಲ ಸಂಕಷ್ಟಗಳನ್ನು ಎದುರಿಸಲು ದೇಶದಲ್ಲಿ ಶಕ್ತಿಯುತ ಸರ್ಕಾರದ ಅವಶ್ಯಕತೆಯಿದೆ. ಶಕ್ತಿಯುತ ಸರ್ಕಾರ ಇರಬೇಕೆಂದರೆ ಗಟ್ಟಿಯಾದ ಪ್ರಧಾನಿ ಬೇಕಾಗುತ್ತದೆ. ಅಂತಹ ಗಟ್ಟಿ- ಸಮರ್ಥ ನಾಯಕತ್ವ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿದೆ ಎಂದು ತಿಳಿಸಿದರು.

ಅಭಿವೃದ್ಧಿಯತ್ತ ದಾಪುಗಾಲು

ಮೋದಿ ಸರ್ಕಾರದ 10 ವರ್ಷದ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿ ಸ್ವಾವಲಂಬಿಯಾಗುವತ್ತ ಭಾರತ ದಾಪುಗಾಲು ಇಟ್ಟಿದೆ. ದೇಶದಲ್ಲೇ ಸೆಮಿಕಂಡೆಕ್ಟರ್‌ ಚಿಪ್‌ ಉತ್ಪಾದನೆ ಮಾಡುವುದರ ಜತೆಗೆ ಚಂದ್ರಯಾನ ಯಶಸ್ವಿಯಾಗಿ ಮಾಡಿದೆ. ಇವುಗಳ ಜತೆಯಲ್ಲಿ ರಸ್ತೆ, ರೈಲ್ವೆ ಹಾಗೂ ವಿಮಾನಯಾನ ಸಂಪರ್ಕದಲ್ಲಿ ಕ್ರಾಂತಿಯನ್ನೇ ಮಾಡಿದೆ. ಇದು ಬಂಡವಾಳ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದರು.

ಅಭಿವೃದ್ಧಿಯ ಜತೆಗೆ ಜತೆಗೆ ಆಡಳಿತಾತ್ಮಕವಾಗಿಯೂ ಸಾಕಷ್ಟು ದಿಟ್ಟ ಹೆಜ್ಜೆಗಳನ್ನು ಇಟ್ಟಿರುವುದು ಮೋದಿ ಸರ್ಕಾರದ ಹೆಗ್ಗಳಿಕೆ. ತ್ರಿಬಲ್‌ ತಲಾಕ್‌, ಜಮ್ಮು ಕಾಶ್ಮೀರದಲ್ಲಿನ 370 ಕಾಯ್ದೆ ರದ್ದು, ಡಿಜಿಟಲ್‌ ಪ್ರೋಟೆಕ್ಷನ್‌ ಹೀಗೆ ಹಲವು ಕಾನೂನು ಜಾರಿಗೊಳಿಸಿರುವುದು ದೇಶದ ದೃಢ ಸಂಕಲ್ಪಗಳೇ ಆಗಿವೆ. ಇದು ಮೋದಿಯಂತಹ ಸಮರ್ಥ ನಾಯಕತ್ವದಿಂದ ಮಾತ್ರ ಸಾಧ್ಯವಾಗಿದೆ.

ಉಕ್ರೇನ್‌ ಯುದ್ಧದ ಸಮಯದಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಬೇಡಿ ಎಂದು ಹಲವು ರಾಷ್ಟ್ರಗಳು ಒತ್ತಡವನ್ನೂ ಹೇರಿದ್ದವು. ಆದರೆ, ಯಾವುದಕ್ಕೂ ಜಗ್ಗದೇ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಯಿತು. ಇದೆಲ್ಲವೂ ಮೋದಿಯಂತಹ ದಿಟ್ಟ ನಾಯಕತ್ವದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಕಲ್ಲಿದ್ದಿಲು ಕ್ಷೇತ್ರದಲ್ಲಿ ಆತ್ಮನಿರ್ಭರ:

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಲ್ಲಿದ್ದಲು ಖಾತೆ ಎಂದರೆ ಹಗರಣಗಳ ಖಾತೆ ಎಂಬ ಖ್ಯಾತಿ ಇತ್ತು. ಆದರೆ, ಮೋದಿ ಅವರು ಬಂದ ಮೇಲೆ ಕಲ್ಲಿದ್ದಲು ಹರಾಜು ಪ್ರಕ್ರಿಯೆಲ್ಲಿ ಪಾರದರ್ಶಕತೆ ತಂದರು. ಇದರ ಪರಿಣಾಮ ಮುಂದಿನ ಕೆಲವೇ ವರ್ಷಗಳಲ್ಲಿ ಕಲ್ಲಿದ್ದಲು ಆಮದು ನಿಲ್ಲಿಸಿ ದೇಶದಲ್ಲೇ ಉತ್ಪಾದನೆ ಮಾಡುವ ಮೂಲಕ ಕಲ್ಲಿದ್ದಲು ಕ್ಷೇತ್ರದಲ್ಲಿ ಆತ್ಮನಿರ್ಭರವಾಗಲಿದೆ ಎಂದರು.

ಲೋಕಸಭೆ ಚುನಾವಣೆಗೆ ನಿಲ್ಲುವ ಮುನ್ನ ಅಂದರೆ 2004ರಲ್ಲಿ ನಿಮ್ಮ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ ಎಂದು ನಿಮಗೆ ಭಾಷೆ ನೀಡಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಕಲ್ಲಿದ್ದಲು ಖಾತೆಯ ಕಪ್ಪು ಮಸಿ ನನ್ನ ಕೈಗೆ ತಗುಲಲು ಅವಕಾಶ ಕೊಟ್ಟಿಲ್ಲ. ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಿ ತೋರಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಕೆಎಲ್‌ಇ ಸಂಸ್ಥೆಯ ಚೇರಮನ್‌ ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಪ ಸದಸ್ಯರಾದ ಪ್ರದೀಪ ಶೆಟ್ಟರ್‌, ಎಸ್‌.ವಿ. ಸಂಕನೂರ, ಶಾಸಕ ಎಂ.ಆರ್‌. ಪಾಟೀಲ, ಶಂಕರಣ್ಣ ಮುನವಳ್ಳಿ ಸೇರಿದಂತೆ ಹಲವರಿದ್ದರು.